ಕರ್ನಾಟಕ

ಮುಂಬೈಯಲ್ಲಿ ಅತೃಪ್ತರ ಜೊತೆ ಇರುವ ಎಚ್​. ವಿಶ್ವನಾಥ್​ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ಸದನಕ್ಕೆ ತಿಳಿಯಬೇಕಿದೆ: ಸಾ.ರಾ. ಮಹೇಶ್​

Pinterest LinkedIn Tumblr

ಬೆಂಗಳೂರು: ಜೆಡಿಎಸ್​ ಮಾಜಿ ರಾಜ್ಯಾಧ್ಯಕ್ಷ ಎಚ್​. ವಿಶ್ವನಾಥ್​ ಅವರು ಇಂದು ಅತೃಪ್ತ ಶಾಸಕರ ಜತೆ ಮುಂಬೈನಲ್ಲಿದ್ದಾರೆ. ಅವರು ಈ ಮೊದಲು ತಮ್ಮನ್ನು ಮಾರಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಅದೇ ವಿಶ್ವನಾಥ್​ ಅವರು ಈಗ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ಸದನಕ್ಕೆ ತಿಳಿಯಬೇಕಿದೆ ಎಂದು ವಿಶ್ವನಾಥ್​ ವಿರುದ್ಧ ಸಚಿವ ಸಾ.ರಾ. ಮಹೇಶ್​ ವಾಗ್ದಾಳಿ ನಡೆಸಿದರು.

ಇವರು ನಮ್ಮ ಪಕ್ಷದ ಸದಸ್ಯರು, ರಾಜ್ಯಾಧಕ್ಷರಾಗಿದ್ದರು ನಮ್ಮಲ್ಲಿ. ಸಿದ್ದರಾಮಯ್ಯನವರು ಇವರ ಸಹವಾಸ ಸಾಕು ಎಂದು ಬಿಟ್ಟ ಮೇಲೆ ನಾವೇ ಅವರನ್ನು ಪಕ್ಷಕ್ಕೆ ಕರೆತಂದಿದ್ದೆವು. ಅವರು ಲೋಕಸಭೆ ಚುನಾವಣೆಗೆ ನಾಲ್ಕು ತಿಂಗಳು ಮೊದಲು ಒಂದು ಹೇಳಿಕೆ ಕೊಟ್ಟಿದ್ದರು. ಪ್ರತಿಪಕ್ಷಗಳಿಗೆ ಅಧಿಕಾರಿ ಹಿಡಿಯುವ ಹಂಬಲ, ಕಾತುರ ಇರುವುದು ಸಹಜ. ಆದರೆ, ಅದಕ್ಕಾಗಿ ವಾಮಮಾರ್ಗ ಹಿಡಿಯುವುದು ಸರಿಯಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುವುದು ಬಿಜೆಪಿಗೆ ಶೋಭೆ ತರುವುದಲ್ಲ ಎಂದು ಅವರು ತಿಳಿಸಿದ್ದರು.

ನಾವು ಅಮೆರಿಕಕ್ಕೆ ಹೋಗುವ ಮುನ್ನ ನನ್ನ ಮೇಲೆ ಆರೋಪ ಮಾಡಿದ್ದರು. ಸಾರಾ ಮಹೇಶ್​ ಧೋರಣೆಯಿಂದ ಬೇಸತ್ತು ಹೋಗುತ್ತಿದ್ದೇನೆ ಎಂದು ತಿಳಿಸಿದ್ದರು. ಆ ನಂತರ ಅವರನ್ನು ನಾನು ನಮ್ಮ ತೋಟಕ್ಕೆ ಕರೆಸಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ನಿಮಗೆ ಮಂತ್ರಿಯಾಗಬೇಕು ಎಂಬ ಆಸೆ ಇದೆಯೇ ಎಂದು ಕೇಳಿದ್ದೆ. ನನಗೆ ಮಂತ್ರಿಯಾಗುವ ಆಸೆ ಇಲ್ಲ. ಆದರೆ, ಚುನಾವಣೆ ವೇಳೆ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಬಿಜೆಪಿಯವರು ಕರೆದಿದ್ದರು, ನನಗೆ 28 ಕೋಟಿ ರೂ. ಕೊಡುವುದಾಗಿ ತಿಳಿಸಿದ್ದರು. ಆದರೆ, ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡರು ನನ್ನನ್ನು ನಂಬಿ ನನ್ನನ್ನು ಶಾಸಕನನ್ನಾಗಿ ಮಾಡಿದರು. ಅವರಿಗೆ ನಾನು ಮೋಸ ಮಾಡುವುದಿಲ್ಲ. ನನ್ನನ್ನು ಮಾರಿಕೊಳ್ಳುವುದಿಲ್ಲ. ಆದರೆ, ಸಾಲ ತೀರಿಸಲು ನನಗೆ ಸಹಾಯ ಮಾಡು ಎಂದು ಕೇಳಿದರು.

ನನ್ನ ಬಳಿ ಈಗ ಅಷ್ಟು ದುಡ್ಡಿಲ್ಲ, ಎಲ್ಲಿ ಸಾಲ ಮಾಡಿದ್ದೇನೆ ಎಂದು ಹೇಳಿದರೆ ನಾನು ಅವರಿಗೆ ಪ್ರತೀ ತಿಂಗಳೂ ಇಷ್ಟು ಎಂದು ಹಣ ನೀಡಿ ಸಾಲ ತೀರಿಸುತ್ತೇನೆ ಎಂದು ತಿಳಿಸಿದ್ದೆ. ಆದರೆ, ಅವರು ಇಂದು ಮುಂಬೈಗೆ ಹೋಗಿದ್ದಾರೆ. ಅವರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿದರು ಯಾರು. ಅವತ್ತು ಹೀಗೆ ಹೇಳಿದವರು ಈಗ ಎಷ್ಟಕ್ಕೆ ಮಾರಾಟವಾಗಿದ್ದಾರೆ ಎಂಬುದು ತಿಳಿಯಬೇಕಿದೆ ಎಂದು ಸಾ.ರಾ. ಮಹೇಶ್​ ವಾಗ್ದಾಳಿ ನಡೆಸಿದರು.

Comments are closed.