ಕರ್ನಾಟಕ

ಸುಪ್ರೀಂ​ ನೀಡಿದ್ದ ಗಡುವು ಮೀರಿ ವಿಧಾನಸೌಧಕ್ಕೆ ಬಂದ ​ಶಾಸಕರು!

Pinterest LinkedIn Tumblr


ಬೆಂಗಳೂರು (ಜು.11): ಇಂದು ಸಂಜೆ ಆರು ಗಂಟೆಯೊಳಗೆ ಖುದ್ದಾಗಿ ಸ್ಪೀಕರ್​ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಿ ಎಂದು 10 ಜನ ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿತ್ತು. ಆದರೆ, ಈ ಗಡುವು ಮುಗಿದ ಮೂರು ನಿಮಿಷಗಳ ನಂತರ ರೆಬೆಲ್​ ನಾಯಕರು ವಿಧಾನಸೌಧ ತಲುಪಿದ್ದಾರೆ. ಸುಪ್ರೀಂಕೋರ್ಟ್​ ನೀಡಿದ್ದ ಗಡುವಿನೊಳಗೆ ಬರದ ಶಾಸಕರ ರಾಜೀನಾಮೆಯನ್ನು ಸ್ಪೀಕರ್​ ಸ್ವೀಕರಿಸುತ್ತಾರಾ ಇಲ್ಲವಾ ಎಂಬ ಕುತೂಹಲದ ಪ್ರಶ್ನೆ ಮೂಡಿದೆ.

ಸುಪ್ರೀಂ ನೀಡಿದ ಅವಧಿ ಮೀರಿದ ಬಳಿಕ ಶಕ್ತಿ ಸೌಧಕ್ಕೆ ಪ್ರವೇಶಿಸಿದ ಅತೃಪ್ತ ಶಾಸಕರು, ಎಲ್ಲಿ ಸ್ಪೀಕರ್ ತಮ್ಮ ಅರ್ಜಿಯನ್ನು ನಿರಾಕರಿಸುತ್ತಾರೋ ಎಂಬ ಭಯದಿಂದ ವಿಧಾನಸೌಧಕ್ಕೆ ಬಂದಾಕ್ಷಣ ಸ್ಪೀಕರ್ ಕಚೇರಿಗೆ ಓಡೋಡಿ ಬಂದರು. ಮೊದಲಿಗೆ ಭಯದಿಂದಲೇ ಶಾಸಕ ಭೈರತಿ ಬಸವರಾಜ್​ ವಿಧಾನಸೌಧದೊಳಗೆ ಓಡಿ ಹೋಗಿ ಸ್ಪೀಕರ್​ ಕಚೇರಿ ತಲುಪಿದರು.

ತಡವಾಗಿ ಸ್ಪೀಕರ್​ ಕಚೇರಿ ಒಳ ಪ್ರವೇಶಿಸಿದ ಶಾಸಕರು ಕೈ ಬರಹದಲ್ಲಿ ರಾಜೀನಾಮೆ ಬರೆದು ಸಲ್ಲಿಸಿದ್ದಾರೆ. ಒಬ್ಬೊಬ್ಬರೇ ಶಾಸಕರ ರಾಜೀನಾಮೆಗೆ ಕಾರಣ ಕೇಳಿ ಸ್ಫೀಕರ್ ವಿವರ ಪಡೆಯುತ್ತಿದ್ದಾರೆ. ಈ ಎಲ್ಲ ಘಟನೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.

ಈ ವೇಳೆ ಕಾಂಗ್ರೆಸ್​ ಪರ ವಾದಿಸಲು ಶಶಿಕುಮಾರ್​ ಶೆಟ್ಟಿ ಒಳಗೊಂಡ ಮೂವರು ವಕೀಲರ ತಂಡ ಹಾಗೂ ಬಿಜೆಪಿ ಪರ ವಾದಕ್ಕೆ ಅಶೋಕ್ ಹಾರನಳ್ಳಿ ಮತ್ತು ತಂಡಕ್ಕೂ ಪ್ರವೇಶ ನಿರಾಕರಿಸಲಾಗಿದೆ.

ಸ್ಪೀಕರ್ ನಮ್ಮ ರಾಜೀನಾಮೆ ಅರ್ಜಿ ಅಂಗೀಕಾರಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ರೆಬೆಲ್​ ನಾಯಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್​ ನಡೆಸಿತ್ತು. ಈ ವೇಳೆ ಮತ್ತೊಮ್ಮೆ ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಸಲ್ಲಿಸಿ. ಈ ರಾಜೀನಾಮೆ ನಿರ್ಣಯದ ಬಗ್ಗೆ ಸ್ಪೀಕರ್​ ಇಂದೇ ಕ್ರಮ ತೆಗೆದುಕೊಂಡು, ಆ ಬಗ್ಗೆ ಕೋರ್ಟ್​ಗೆ ಮಾಹಿತಿ ನೀಡಬೇಕು. ನಾಳೆ ನಡೆಯುವ ವಿಚಾರಣೆಯಲ್ಲಿ ಆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ನ್ಯಾಯಾಲಯ ಹೇಳಿತ್ತು.

ಬೆಳಗ್ಗೆ 11 ಗಂಟೆಗೆ ತೀರ್ಪು ಪ್ರಕಟವಾಗುತ್ತಿದ್ದಂತೆ ಮುಂಬೈನಲ್ಲಿ ಬೀಡುಬಿಟ್ಟಿದ್ದ ರೆಬೆಲ್​ ನಾಯಕರುವಿಶೇಷ ವಿಮಾನದ ಮೂಲಕ ರಾಜಧಾನಿಗೆ ಆಗಮಿಸಲು ಸಿದ್ಧತೆ ನಡೆಸಿದ್ದರು. ವಿಶೇಷ ವಿಮಾನದ ಮೂಲಕ ರೆಬೆಲ್​ ನಾಯಕರು ಸಂಜೆ 5.40ರ ಸುಮಾರಿಗೆ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಇನ್ನು ಸುಪ್ರೀಂಕೋರ್ಟ್​ ಸೂಚನೆ ಹಿನ್ನೆಲೆ ಅವರ ರಕ್ಷಣೆ ಹೊಣೆ ಹೊತ್ತಿದ್ದ ಬೆಂಗಳೂರು ಪೊಲೀಸರು ಅತೃಪ್ತ ಶಾಸಕರಿಗಾಗಿ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್​ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಅವರಿಗೆ ಝಡ್​ ಪ್ಲಸ್​ ಸೆಕ್ಯೂರಿಟಿ ಕೂಡ ನೀಡಿ, ವಿಧಾನಸೌಧ ಸುತ್ತ ಸೆಕ್ಷನ್​ 144 ಜಾರಿ ಮಾಡಿ ಬಿಗಿ ಭದ್ರತೆ ನೀಡಲಾಗಿತ್ತು. ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ದರೂ ರೆಬೆಲ್​ ನಾಯಕರು ಶಕ್ತಿಸೌಧಕ್ಕೆ ಮೂರು ನಿಮಿಷ ತಡವಾಗಿ ಆಗಮಿಸಿದರು.

Comments are closed.