ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿ ದೇವಸ್ಥಾನ ಸುತ್ತುವುದು ಬಿಟ್ಟು ಗೋವುಗಳನ್ನು ರಕ್ಷಣೆ ಮಾಡಲಿ: ಶೋಭಾ ಕರಂದ್ಲಾಜೆ ಆಗ್ರಹ

Pinterest LinkedIn Tumblr

ಬೆಂಗಳೂರು: ಪುತ್ತೂರು, ಬಂಟ್ವಾಳ, ವಿಟ್ಲ, ಉಡುಪಿ, ಮಂಗಳೂರು ಮತ್ತಿತರ ಕಡೆ ಈ ರೀತಿ ಹಸುಗಳನ್ನ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕರ್ನಾಟಕ ದನ ಸಾಗಿಸುವುದರಲ್ಲಿ ಮೊದಲನೇ ಸ್ಥಾನ ಎಂಬ ಅಪಕೀರ್ತಿ ಪಡೆದಿದೆ. ಸಿಎಂ ದಿನ ಬೆಳಗಾದರೆ, ದೇವಸ್ಥಾನ ಸುತ್ತುತ್ತಾರೆ, ಅದು ಬಿಟ್ಟು ಗೋವುಗಳನ್ನು ರಕ್ಷಣೆ ಮಾಡಲಿ. ಜೀವನೋಪಾಯಕ್ಕಾಗಿ ಜನ ಹಸು ಸಾಕುತ್ತಿದ್ದಾರೆ. ಆದರೆ ಜೀವನೋಪಾಯದ ಹಸುಗಳನ್ನೂ ಕಳ್ಳರು ಕದ್ದು ತೆಗೆದುಕೊಂಡು ಹೋದರೆ ಗತಿ ಏನು? ಸರ್ಕಾರವೂ ಈ ವಿಚಾರದಲ್ಲಿ ಪರಿಹಾರ ಕೊಡುತ್ತಿಲ್ಲ. ಗೋ ಹತ್ಯೆ ನಿಷೇಧ ಕಾಯಿದೆಯನ್ನು ತಕ್ಷಣ ಜಾರಿಗೆ ತನ್ನಿ. ಇದು ಕೇವಲ ಧರ್ಮದ ವಿಚಾರ ಅಲ್ಲ. ಗೋಮಾಂಸ ಭಕ್ಷಣೆ ವಿಚಾರವೂ ಅಲ್ಲ. ಇದು ಗೋಸಂಕುಲ ರಕ್ಷಣೆ ವಿಚಾರ, ರಾಜ್ಯದ ರೈತರ ರಕ್ಷಣೆ ವಿಚಾರ. ಹೀಗಾಗಿ ತಕ್ಷಣ ಗೋ ಹತ್ಯೆ ನಿಷೇಧ ಕಾಯಿದೆ ಜಾರಿಗೆ ತನ್ನಿ ಎಂದು ಸಿಎಂ ಕುಮಾರಸ್ವಾಮಿಗೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ ಮಾಡಿದರು.

ಉಡುಪಿ, ಮಂಗಳೂರು, ಬೆಂಗಳೂರಿನಲ್ಲಿ ಅಕ್ರಮ ಗೋ ಸಾಗಣೆ ನಡೆಯುತ್ತಿದೆ. ಮನೆ ಮುಂದೆ ಹಟ್ಟಿಯಲ್ಲಿ ಕಟ್ಟಿದ ಹಸುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಮಂಗಳೂರಿನ ಜೋಕಟ್ಟೆಯಲ್ಲಿ 20 ಹಸು ಕಟ್ಟಿ ಹಾಕಿದ್ದನ್ನು ಸೆರೆ ಹಿಡಿಯಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ರಾತ್ರೋರಾತ್ರಿ ತಲವಾರ್ ಹಿಡಿದು ಹಟ್ಟಿಗೆ ಬಂದು ಹಸುಗಳನ್ನ ಕಳ್ಳತನ ಮಾಡಿ ಸಾಗಿಸಲಾಗುತ್ತಿದೆ. ದನಕರುಗಳಿಗೆ ಮೇವು ಕೊಡುವುದನ್ನು ಸರ್ಕಾರ ಮರೆತಿದೆ. ರಾಜ್ಯ ಸರ್ಕಾರ ಸತ್ತಿದೆ. ಹಸು, ದನಕರುಗಳಿಗೆ ಮೇವು, ನೀರು‌ ಕೊಡುವ ಸಹಾನುಭೂತಿ ಕೂಡ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

ಸಚಿವ ಯು.ಟಿ.ಖಾದರ್ ವಿರುದ್ಧ ವಾಗ್ದಾಳಿ
ನಾನು ಮಾತಾಡಿದ ನಂತರ ಸಚಿವ ಯು.ಟಿ.ಖಾದರ್ ಮಾತನಾಡುತ್ತಾರೆ. ಇದಕ್ಕೆಲ್ಲ ಖಾದರ್ ನಿರ್ಲಕ್ಷ್ಯ ಕಾರಣ. ಖಾದರ್ ಉಸ್ತುವಾರಿ ಸಚಿವರಾದ ಬಳಿಕ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಷ್ಟು ಕೊಲೆಗಳಾಗಿವೆ? ಯಾವ ಕಾರಣದಿಂದ ಕೊಲೆಗಳಾಗಿವೆ ಗೊತ್ತಾ? ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ಕರಾವಳಿಯಲ್ಲಿ ಯಾವುದೇ ಅಕ್ರಮ ನಡೆದರೂ ಅದರ ಹಿಂದೆ ಸಚಿವ ಖಾದರ್ ಇರುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಜನರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಏನೇ ನಡೆದರೂ ಅದು ಖಾದರ್ ಮೂಗಿನ ನೇರಕ್ಕೆ ಬಂದು ಹೋಗಿರುತ್ತದೆ. ಖಾದರ್ ಉಸ್ತುವಾರಿಯಾಗಿ ಏನು ಮಾಡಬೇಕೋ ಅದನ್ನು ಮಾಡಲಿ ಎಂದು ಕಿಡಿಕಾರಿದರು. ಮಂಗಳೂರಿನ ಜೋಕಟ್ಟೆಯಲ್ಲಿನ ಘಟನೆಗೆ ಖಾದರ್ ಕಾರಣ. ಅವರ ಬೆಂಬಲಿಗನಿಂದಲೇ ಆ ಘಟನೆ ನಡೆದಿರುವುದು. ಕೇಸ್​ ಖುಲಾಸೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಗೋ ರಕ್ಷಣೆಗೆ ಹೋದವರ ಮೇಲೆ ಕೇಸ್ ಹಾಕುತ್ತಾರೆ. ಗೋ ಕಳ್ಳರ ಮೇಲೆ ಕೇಸ್ ಹಾಕಲ್ಲ. ನಾವು ರಕ್ಷಣೆ ಮಾಡಬಾರದು ಎಂದಾದರೆ, ನೀವು ಸ್ಕ್ವಾಡ್ ನಿರ್ಮಾಣ ಮಾಡಿ. ಗೋ ಕಳ್ಳತನ ಆಗುವ ವೇಳೆ ನಾವು ನಿಮಗೆ ತಿಳಿಸುತ್ತೇವೆ. ಸ್ಪೆಷಲ್ ಸ್ಕ್ವಾಡ್ ನಿರ್ಮಾಣ ಮಾಡಿ. ಮೋಟರ್ ವಾಹನ ಆ್ಯಕ್ಟ್ ನಲ್ಲಿ ಗೂಡ್ಸ್ ವೆಹಿಕಲ್​​ನಲ್ಲಿ ಗೋ ಸಾಗಾಟ ಮಾಡಬಾರದು. ಅದಕ್ಕೆ ವಿಶೇಷ ವಾಹನದ ಪರವಾನಿಗೆ ಬೇಕು. ಇನ್ನು ಮೋಟರ್​​ ಸೈಕಲ್​ನಲ್ಲ, ಗೂಡ್ಸ್ ವೆಹಿಕಲ್ ಸೇರಿದಂತೆ ಬೇರೆ ವಾಹನಗಳನ್ನು ಬ್ಯಾನ್ ಮಾಡಿ ಮಾಡಿ ಆಗ್ರಹಿಸಿದರು.

ಐಎಂಎ ಪ್ರಕರಣದಲ್ಲಿ ಸಚಿವ ಜಮೀರ್ ಗೆ ಇಡಿ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತನಿಖೆಯನ್ನು ಸಿಬಿಐ ಮತ್ತು ಇಡಿಗೆ ವಹಿಸುವ ಬೇಡಿಕೆ ನಮ್ಮದಾಗಿತ್ತು. ಯಾರೆಲ್ಲಾ ರಾಜಕಾರಣಿಗಳು ಭಾಗಿಯಾಗಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿತ್ತು. ಇದೀಗ ಇಡಿ ಸಚಿವ ಜಮೀರ್ ಗೆ ನೋಟೀಸ್ ನೀಡಿರುವ ಮಾಹಿತಿ ಇದೆ. ತಕ್ಷಣ ನಿಕ್ಷಪಕ್ಷಪಾತ ತನಿಖೆಗೆ ಜಮೀರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು.

ಮೈತ್ರಿ ನಾಯಕರ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಗ್ರಾಮವಾಸ್ಯದಿಂದ ಏನ್ ಪ್ರಯೋಜನ ಬಂತು? ಸಮಸ್ಯೆಗಳಿರುವ ಗ್ರಾಮಗಳಿಗೇ ಹೋಗ್ತೀರಿ, ಅಲ್ಲಿನ ಜನರನ್ನೇ ಗದರಿಸ್ತೀರಿ. ಸಿಎಂ, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಎಲ್ರೂ ಮೋದಿಗೆ ಯಾಕೆ ಓಟ್ ಕೊಟ್ರಿ ಅಂತ ಕೇಳ್ತಾರೆ. ಮೋದಿ ಉತ್ತಮವಾಗಿ ಆಡಳಿತ ಮಾಡಿದ್ಧಾರೆ, ಅದಕ್ಕೆ ಜನ ಮತ ಹಾಕಿದ್ದಾರೆ. ನಿಮಗೆ ಆಡಳಿತ ಮಾಡಕ್ಕಾಗಲ್ಲ ಅಂದರೆ ಮನೆಗೆ ಹೋಗಿ. ನಾಟಕ ಆಡೋಕೆ ಗ್ರಾಮವಾಸ್ತವ್ಯ ಮಾಡ್ತೀರಾ ಅಂದ್ರೆ ಯಾಕಾದ್ರೂ ಹೋಗ್ತೀರಾ? ಮತದಾರರನ್ನು ಹೆದರಿಸೋದು, ಬೆದರಿಸೋದು ಮಾಡ್ತಿದೀರಾ? ಜನತಾಂತ್ರಿಕ ವ್ಯವಸ್ಥೆಯಲ್ಲಿ ಮತ ಹಾಕೋದು ಜನರ ಹಕ್ಕು. ನೀವು ಕೆಲಸ ಮಾಡಿದ್ದರೆ, ನಿಮ್ಮ‌ಹೊಣೆ ನಿಭಾಯಿಸಿದ್ದರೆ, ಜನ ನಿಮಗೆ ಮತ ಹಾಕ್ತಿದ್ರು. ಕಳೆದೊಂದು ವರ್ಷ ಏನ್ ಮಾಡಿದ್ರಿ? ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರವೇ ಮುಂದುವರೆಯಲಿ
ಬಿಜೆಪಿ ಸರ್ಕಾರ ರಚನೆ ಕುರಿತು ಶೋಭಾ ಕರಂದ್ಲಾಜೆ ಯು-ಟರ್ನ್ ಹೊಡೆದಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅತಂತ್ರವಾಗಿದೆ. ಈ ಜನವಿರೋಧಿ ಸರ್ಕಾರವೇ ಮುಂದುವರೆಯಬೇಕು. ಕುರಿ ಕೊಬ್ಬಿದಷ್ಟೂ ಕಡಿಯುವವನಿಗೆ ಲಾಭ. ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ನಮ್ಮ‌ ನಾಯಕರ ಮಾತುಗಳನ್ನು ನಾನು ಒಪ್ಪಲ್ಲ. ಮೈತ್ರಿ ಸರ್ಕಾರವೇ ಮುಂದುವರೆಯಲಿ ಜನರೇ ಅವರಿಗೆ ಬುದ್ಧಿ‌ ಕಲಿಸ್ತಾರೆ. ಸರ್ಕಾರ ರಚನೆಯ ಯಾವ ಪ್ರಯತ್ನವನ್ನೂ ಬಿಜೆಪಿ‌ ಮಾಡ್ತಿಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿದ್ದೇ ನಾವು 105 ಶಾಸಕರು ಕೆಲಸ ಮಾಡುತ್ತೇವೆ. ಮಧ್ಯಂತರ ಚುನಾವಣೆಗೂ ನಾವು ತಯಾರಾಗುತ್ತಿಲ್ಲ. ರಾಜಕಿಯ ಪಕ್ಷವಾಗಿ ಚುನಾವಣೆ ಯಾವಾಗ ಬಂದರೂ ನಾವು ಸಿದ್ಧವಾಗಿರುತ್ತೇವೆ. ಆದರೆ ಈ ಸರ್ಕಾರವೇ ಮುಂದುವರೆಯಲಿ ಇವರೇ ಅಧಿಕಾರದಲ್ಲಿದ್ದು ಕೆಲಸ ಮಾಡಲಿ ಎಂದು ಅಚ್ಚರಿಯ ಹೇಳಿಕೆ ನೀಡಿದರು.

Comments are closed.