
ಬೆಂಗಳೂರು(ಜೂನ್ 29): ರಾಜ್ಯದಲ್ಲಿರುವ ಐಸಿಎಸ್ಇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡವನ್ನ ದ್ವಿತೀಯ ಭಾಷೆಯಾಗಿ ಕಲಿಸಲು ಆದೇಶ ಹೊರಡಿಸಲಾಗಿದೆ. ಇದನ್ನು ಪಾಲಿಸದ ಶಾಲೆಗಳಿಗೆ ದಂಡ ವಿಧಿಸುವುದರ ಜೊತೆಗೆ ಮಾನ್ಯತೆಯನ್ನೂ ಹಿಂಪಡೆಯಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ತಿಳಿಸಿದ್ದಾರೆ.
ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಕಲಿಸುವ ಸರ್ಕಾರದ ಆದೇಶದ ಬಗ್ಗೆ ಕೆಲ ಐಸಿಎಸ್ಇ ಪಠ್ಯಕ್ರಮದ ಶಾಲೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯನ್ನೂ ಕರೆದು ಈ ಶಾಲೆಗಳು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ಇಲಾಖೆಯ ನಿಲುವನ್ನು ಇವತ್ತು ಸ್ಪಷ್ಟಡಿಸಿದ್ದಾರೆ.
ಇದೇ ವೇಳೆ, ಮಕ್ಕಳಿಗೆ ಶಿಕ್ಷಣ ಹಕ್ಕು ದಯಪಾಲಿಸುವ ಆರ್ಟಿಇ ಕಾಯ್ದೆಗೆ ಕೆಲ ಶಾಲೆಗಳು ಬೆಲೆ ಕೊಡುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ. ಆರ್ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಂದ ಶಾಲೆಗಳಲ್ಲಿ ಶುಲ್ಕ ವಸೂಲು ಮಾಡಲಾಗುತ್ತಿರುವ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ಬಗ್ಗೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಗುಬ್ಬಿ ಶ್ರೀನಿವಾಸ್ ಅವರು, ಶಾಲೆಗಳ ವಿರುದ್ಧ ಇಂಥ ದೂರುಗಳು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಶಾಲೆಗಳು ಆರ್ಟಿಇ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳ ಪೋಷಕರ ಹತ್ತಿರ ಹಣ ಕೇಳುವುದು ತಪ್ಪು. ಅಂಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗುಬ್ಬಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಇನ್ನು, ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ನೀಡಿರುವ ವೇಳಾಪಟ್ಟಿಯಂತೆಯೇ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ಕಡ್ಡಾಯ ವರ್ಗಾವಣೆ ತಪ್ಪು ಎಂದು ಕೆಲ ವಿಧಾನಪರಿಷತ್ ಸದಸ್ಯರು ತಮ್ಮ ಬಳಿ ಹೇಳಿದ್ದರು. ಆದರೆ, ತಾನು ಈ ವಿಚಾರದಲ್ಲಿ ಅಚಲವಾಗಿದ್ದು, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿಯೇ ತೀರುತ್ತೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿದ್ದಾರೆ.
Comments are closed.