
ಚಾಮರಾಜನಗರ (ಜೂ.19): ಮುಂಗಾರು ಆರಂಭವಾಗಿದ್ದರೂ ರಾಜ್ಯದಲ್ಲಿ ಮಳೆ ಈವರೆಗೂ ನಿಗದಿತ ಪ್ರಮಾಣದಲ್ಲಿ ಸುರಿದಿಲ್ಲ. ಮಳೆಗಾಗಿ ಕೃಷಿಕರು ಎದುರು ನೋಡುತ್ತಿದ್ದಾರೆ. ನಾಡಿನೆಲ್ಲೆಡೆ ಬರ ಪರಿಸ್ಥಿತಿ ಎದುರಾಗಿದ್ದು, ನೀರಿಲ್ಲದೆ ಜನ-ಜಾನುವಾರುಗಳು ತತ್ತರಿಸಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜುಲೈ ಮೊದಲ ವಾರದಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಮುಂದಾಗುವುದಾಗಿ ಕಂದಾಯ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬರ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿರುವ ಅವರು, ಕಳೆದ 18 ವರ್ಷಗಳಲ್ಲಿ 13 ವರ್ಷ ಬರಗಾಲವೇ ಇದೆ. ಕೆರೆ ಕಟ್ಟೆಗಳು ಒಣಗಿದ್ದು, ಜಲಾಶಯಗಳಲ್ಲಿಯೂ ನೀರು ಡೆಡ್ ಸ್ಟೋರೆಜ್ ಹಂತಕ್ಕೆ ತಲುಪಿದೆ.
ಜೂನ್ ಮೊದಲ ವಾರದಿಂದ ಮಾನ್ಸೂನ್ ರಾಜ್ಯಕ್ಕೆ ಆಗಮಿಸಬೇಕಿತ್ತು. ಆದರೆ, ಈ ಬಾರಿ ವಿಳಂಬವಾಗಿದ್ದು, ಬಿತ್ತನೆ ಕಾರ್ಯ ಇನ್ನು ಆರಂಭವಾಗಿಲ್ಲ. ರಾಜ್ಯದಲ್ಲಿ ಈವರೆಗೆ ಶೇ. 30ರಷ್ಟು ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಆವರಿಸಿರುವ ಬರ ನಿರ್ವಹಣೆಗೆ ಸರ್ಕಾರ ಸಿದ್ದವಾಗಿದ್ದು, ಬರ ಎದುರಿಸಲು ಹಣದ ಕೊರತೆ ಇಲ್ಲ. ಬರ ಹಿನ್ನೆಲೆ ರೈತರಿಗೆ ಬೆಳೆ ನಷ್ಟವಾದರೆ ಅದನ್ನು ಪೂರೈಸಲು ಸರ್ಕಾರ ಸಿದ್ಧವಾಗಿದೆ. ಬೆಳೆ ನಷ್ಟವಾದ ಒಂದೇ ವಾರದೊಳಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದರು.
ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಜುಲೈ ಮೊದಲ ವಾರದಿಂದ ಮೋಡ ಬಿತ್ತನೆ ಮಾಡಲಾಗುವುದು. ಕೃತಕ ಮೋಡ ಬಿತ್ತನೆ ಮಾಡುವ ಮೂಲಕ ಮಳೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಕಳೆದ ಒಂದು ತಿಂಗಳಿನಿಂದ ನಾಡಿನ ಬರ ಅಧ್ಯಯನ ನಡೆಸುತ್ತಿರುವ ಸಚಿವ ಆರ್ ವಿ ದೇಶಪಾಂಡೆ, ಉತ್ತರ ಕರ್ನಾಟಕದಲ್ಲಿ ಬರಗಾಯ ಛಾಯೆ ಭೀಕರವಾಗಿದ್ದು, ಮಳೆ ಆಗಮಿಸದಿದ್ದರೆ ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆಗೆ ಸಕಲ ತಯಾರಿ ನಡೆಸಲಾಗುವುದು ಎಂದು ಹೇಳಿದ್ದರು
Comments are closed.