ಕರ್ನಾಟಕ

ಆರ್​ಎಸ್ಎಸ್ ಅನ್ನು ಮೆಚ್ಚಿಸಲು ಹೋದ ರೋಷನ್ ಬೇಗ್ ಈಗ ಅತಂತ್ರ!

Pinterest LinkedIn Tumblr

ಬೆಂಗಳೂರು (ಜೂ. 19): ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿಷಯೇ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪಕ್ಷ ಅಮಾನತು ಮಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದ ದೂರಿನ ಆಧಾರದ ಮೇರೆಗೆ ಹೈಕಮಾಂಡ್​​ ಅಮಾನತು ಮಾಡಿದ್ದಾರೆ. ಈಗ ಬೇಗ್​ ಅತಂತ್ರ ಸ್ಥಿತಿ ತಲುಪಿದ್ದಾರೆ.

ಬೇಗ್​ ಈ ಮೊದಲು ಬಿಜೆಪಿ ಸೇರಲು ಯೋಜನೆ ರೂಪಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿ, ಬಿಜೆಪಿಗೆ ಜೈ ಎನ್ನುವುದು ಅವರ ಆಲೋಚನೆ ಆಗಿತ್ತು. ಈ ಸಂಬಂಧ ಎಂಜೆ ಅಕ್ಬರ್ ,ಮುಕ್ತಾರ್ ಅಬ್ಬಾಸ್ ನಖ್ವಿ ಮೂಲಕ ಮಾತುಕತೆ ನಡೆಸಿ ಬಿಜೆಪಿ ಹೈಕಮಾಂಡ್ ಒಪ್ಪಿಸುವ ಕೆಲಸವನ್ನು ಬೇಗ್​ ಮಾಡಿದ್ದರು. ಆದರೆ ಅವರು ಬಿಜೆಪಿ ಸೇರುವುದಕ್ಕೆ ಆರ್​ಎಸ್​ಎಸ್​ ಅಪಸ್ವರ ಎತ್ತಿತ್ತು ಎನ್ನಲಾಗಿದೆ.

ಶತಾಯ-ಗತಾಯ ಕಮಲ ಪಾಳಯ ಸೇರಲೇಬೇಕು ಎಂದುಕೊಂಡಿದ್ದ ಬೇಗ್​ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರ ಖುಷಿ ಪಡಿಸಲು ಮುಂದಾಗಿದ್ದರು. ಬಿಜೆಪಿ ಹಾಗೂ ಪಿಎಂ ಮೋದಿ ಹೊಗಳುತ್ತಾ, ಕಾಂಗ್ರೆಸ್​ಗೆ ಮಾತಿನ ಚಾಟಿ ಬೀಸಿದ್ದರು. ಇನ್ನೇನು ಬಿಜೆಪಿ ನಡೆಸಲು ತಯಾರಿ ಆಗಿತ್ತು. ಅಷ್ಟರೊಳಗೆ ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್ ಹೆಸರು ಕೇಳಿಬಂತು. ಹಾಗಾಗಿ ಸ್ವತಃ ಬಿಜೆಪಿ ಬೇಗ್​​ ಸೇರ್ಪಡೆ ಸಾಧ್ಯವಿಲ್ಲ ಎಂದಿತ್ತು.

ಈ ಘಟನೆ ನಂತರದಲ್ಲಿ ಬೇಗ್ ಸ್ವಲ್ಪ ಮೆತ್ತಗಾಗಿದ್ದರು. ಕೆಸಿ ವೇಣುಗೋಪಾಲ್​ ಬಿಜೆಪಿ‌‌ ತಿರಸ್ಕಾರದ ಮಾಹಿತಿ‌ ಪಡೆದಿದ್ದರು. ಇದೇ ಸರಿಯಾದ ಸಮಯ ಎಂದು ನಿರ್ಧಾರ ಮಾಡಿ ಬೇಗ್​ಗೆ ಕೆಸಿವಿ ಸಸ್ಪೆಂಡ್ ಶಿಕ್ಷೆ ಕೊಡಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಗೆ ಬಫೂನ್, ಸಿದ್ದು ದುರಹಂಕಾರಿ, ದಿನೇಶ್ ಗುಂಡೂರಾವ್ ಯೂಸ್‌ಲೆಸ್ ಪ್ರೆಸಿಡೆಂಟ್ ಎಂದು ಬೇಗ್​ ಹೇಳಿಕೆ ನೀಡಿದ್ದರು. ಲೋಕಸಭಾ ಚುನಾವಣೆ ಸೋಲಿನ ಹಿನ್ನಲೆ ಬಿಜೆಪಿ,ಪಿಎಂ ಮೋದಿ ಹೊಗಳಿ ಕೈ ನಾಯಕರನ್ನು ರೋಷನ್ ಬೇಗ್ ಜರಿದಿದ್ದರು. ಹೇಳಿಕೆ ಸಂಬಂಧ ಹಿರಿಯ ಕೆಪಿಸಿಸಿ ವಿವರಣೆ ಕೇಳಿತ್ತು. ಆದರೆ ಬೇಗ್​ ಇದಕ್ಕೆ ಕೇರ್​ ಮಾಡಿರಲಿಲ್ಲ.

ಬೇಗ್​ ಅತಂತ್ರ:

ಗುಲಾಂ ನಬಿ ಆಜಾದ್, ಅಹಮದ್ ಪಟೇಲ್ ಆಶೀರ್ವಾದ ನನಗಿದೆ. ಹಾಗಾಗಿ ಏನು ಮಾಡಿದರು ದಕ್ಕಿಸಿಕೊಳ್ಳಬಹುದೆಂಬ ವಿಶ್ವಾಸದಲ್ಲಿ ರೋಷನ್​ ಬೇಗ್​ ಇದ್ದರು. ಆದರೆ, “ರೋಷನ್​ ಹೇಳಿಕೆ ಸಾರ್ವಜನಿಕವಾಗಿ ಕಾಂಗ್ರೆಸ್ ಪಕ್ಷವನ್ನೇ ಅವಮಾನ ಮಾಡಿದಂತೆ. ಈ ಪ್ರಕರಣದಲ್ಲಿ ನಾವಿಲ್ಲ. ನಾವೇನು ಮಾಡಲು ಸಾಧ್ಯವಿಲ್ಲ,” ಎಂದು ಹೇಳಿ ಬೇಗ್​ ಪರ ನಿಲ್ಲಲ್ಲು ಈ ನಾಯಕರು ಹಿಂದೇಟು ಹಾಕಿದ್ದರು. ಅತ್ತ ಬಿಜೆಪಿ ಕೂಡ ಬಾಗಿಲು ಮುಚ್ಚಿದೆ. ಹಾಗಾಗಿ ಬೇಗ್​​ ಈಗ ಅಂತತ್ರ ಆಗಿದ್ದಾರೆ.

Comments are closed.