ಕರ್ನಾಟಕ

ನಟ-ಸಾಹಿತಿ ಗಿರೀಶ್‌ ಕಾರ್ನಾಡ್‌ ಇನ್ನಿಲ್ಲ: ಸರಳ ಅಂತ್ಯಸಂಸ್ಕಾರಕ್ಕೆ ನಿರ್ಧಾರ

Pinterest LinkedIn Tumblr

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ ಗಿರೀಶ್‌ ಕಾರ್ನಾಡ್‌ ವಿಧಿವಶರಾಗಿದ್ದಾರೆ. ಬೆಂಗಳೂರಿನ ಲ್ಯಾವಿಲ್ಲೆ ರಸ್ತೆಯ ನಿವಾಸದಲ್ಲಿ ಸೋಮವಾರ 81 ವರ್ಷದ ಗಿರೀಶ್‌ ಕಾರ್ನಾಡ್‌ ಕೊನೆಯುಸಿರೆಳೆದಿದ್ದಾರೆ.

ಗಿರೀಶ್ ಕರ್ನಾಡ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪ ಇರುವ ಕಲ್ ಪಲ್ಲಿ ವಿದ್ಯುತ್ ಚಿತಾಗಾರದಲ್ಲಿ ನೆರವೇರಿಸಲು ಕುಂಟುಂಬ ನಿರ್ಧರಿಸಿದೆ. ಕಾರ್ನಾಡ್ ಅವರ ಕೋರಿಕೆ ಮೇರೆಗೆ ಯಾವುದೇ ಧರ್ಮದ ಸಂಪ್ರದಾಯ ಇಲ್ಲದೆ ಸರಳವಾಗಿ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್‌ ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ.

ಸಾರ್ವಜನಿಕರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಇರುವುದಿಲ್ಲ. ಅಂತಿಮ ದರ್ಶನ ಮಾಡಲು ಬಯಸುವವರು ಕಲ್ ಪಲ್ಲಿ ಚಿತಾಗಾರಕ್ಕೆ ಬರಬೇಕೆಂದು ಕಾರ್ನಾಡ್ ಅವರ ಪುತ್ರ ರಘು ಕರ್ನಾಡ್ ಮನವಿ ಮಾಡಿದ್ದಾರೆ.

ಸಾರ್ವಜನಿಕ ದರ್ಶನಕ್ಕೆ ಮನೆಯಲ್ಲಿ ಅವಕಾಶವಿಲ್ಲ. ಬೈಯಪ್ಪನಹಳ್ಳಿಯ ಸ್ಮಶಾನದಲ್ಲಿ ಮಧ್ಯಾಹ್ನ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕಾರ್ನಾಡರ ಶಿಷ್ಯ, ಕುಟುಂಬದ ಆಪ್ತ ನಿರ್ದೇಶಕ ಕೆ.ಎಂ. ಚೈತನ್ಯ ತಿಳಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪಡೆದ 8 ಕನ್ನಡಿಗರ ಪೈಕಿ ಗಿರೀಶ್‌ ಕಾರ್ನಾಡ್‍‌ ಒಬ್ಬರು. ಗಿರೀಶ್‌ ಕಾರ್ನಾಡ್‌ ಮೇ 19, 1938ರಲ್ಲಿ ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಕಾರ್ನಾಡ್‌ ಅವರ ತಂದೆ ಡಾ. ರಘುನಾಥ್‌ ಕಾರ್ನಾಡ್‌, ತಾಯಿ ಕೃಷ್ಣಾ ಬಾಯಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ ಹೊಂದಿದ ಗಿರೀಶ್‌ ಕಾರ್ನಾಡ್‌, ಧಾರವಾಡದ ಬಾಸೆಲ್‌ ಮಿಷನ್‌ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಪದವಿ ಶಿಕ್ಷಣವನ್ನು ಕರ್ನಾಟಕ ಕಾಲೇಜಿನಲ್ಲಿ ಪಡೆದಿರುವ ಕಾರ್ನಾಡ್‌ ಹೋರ್ಡ್ಸ್‌ ಸ್ಕಾಲರ್‌ಶಿಪ್‌ನೊಂದಿಗೆ ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಾಂಗಕ್ಕೆ ತೆರಳಿದರು.

ಆಕ್ಸ್‌ಫರ್ಡ್‌ ಡಿಬೇಟ್‌ ಕ್ಲಬ್‌ಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಈ ಗೌರವ ಪಡೆದ ಮೊದಲ ಏಷ್ಯಾದ ಪ್ರಜೆ ಎಂದೆನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆ ಪಡೆದಿರುವ ಕಾರ್ನಾಡ್‌, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್‌ ಸೇವೆ ಸಲ್ಲಿಸಿದ್ದಾರೆ.

ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.

ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು.

ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

Comments are closed.