ಕರ್ನಾಟಕ

ಮಲ್ಲಿಕಾರ್ಜುನ ಖರ್ಗೆ ಗಬ್ಬರ್​, ನಾನು ಅಮಿತಾಬ್​ ಬಚ್ಚನ್​ ಎಂದ ಮಾಲೀಕಯ್ಯ ಗುತ್ತೇದಾರ್​

Pinterest LinkedIn Tumblr


ಕಲಬುರಗಿ: ಪ್ರತಿಷ್ಠೆಯ ಕಣವಾಗಿದ್ದ ಕಲಬುರಗಿ ಲೋಕಸಭಾ ಚುನಾವಣೆಯನ್ನು ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್​ ‘ಶೋಲೆ’ ಸಿನಿಮಾಗೆ ಹೋಲಿಸಿ ಖರ್ಗೆ ಸೋಲಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿದ್ದ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸೋಲಿಗೆ ಪ್ರಧಾನಿ ಮೋದಿ, ಅಮತ್​ ಶಾ ಅವರಿಂದ ಹಿಡಿದು ಕ್ಷೇತ್ರದ ಬಿಜೆಪಿ ನಾಯಕರು ಪಣತೊಟ್ಟಿದ್ದರು. ಅದರಂತೆ ಖರ್ಗೆ ಅವರು ಬಿಜೆಪಿ ಅಭ್ಯರ್ಥಿ ಉಮೇಶ್​ ಜಾಧವ್ ವಿರುದ್ಧ ಸೋತರು.

ಕಲಬುರಗಿ ಕ್ಷೇತ್ರದ ನೂತನ ಸಂಸದ ಮತ್ತು ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್​ ಅವರು ಕಲಬುರಗಿ ಲೋಕಸಭಾ ಚುನಾವಣೆಯನ್ನು ಹಿಂದಿ ಖ್ಯಾತ ಸಿನಿಮಾ ಶೋಲೆಗೆ ಹೋಲಿಕೆ ಮಾಡಿ ಮಾತನಾಡಿದರು.

ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಸಾಧಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ರಾಮಗರ್​ನ ಗಬ್ಬರ್​ ಸಿಂಗ್ ನಂತೆ ಇದ್ದರು. ಅವರನ್ನು ಸೋಲಿಸಲು ಬಲದೇವ್​ ಸಿಂಗ್​ ಠಾಕೂರ್​ ರೀತಿ ಬಿಎಸ್​ ಯಡಿಯೂರಪ್ಪ ಬಿಜೆಪಿ ನಾಯಕರನ್ನು ಒಟ್ಟುಗೂಡಿಸಿದರು. ಅವರೇ ನಾವು ಎಂಬ ಅರ್ಥದಲ್ಲಿ ಮಾತನಾಡಿದರು.

ಖರ್ಗೆ ಆಪ್ತರಾದ ಶರಣ ಪ್ರಕಾಶ್​ ಪಾಟೀಲ್​ ಅವರನ್ನು ಗಬ್ಬರ್​ ಸಿಂಗ್​ ಬಲಗೈ ಬಂಟ ಸಾಂಬಾಗೆ ಹೋಲಿಸಿದ ಗುತ್ತೇದಾರ್​, ಅರೇ ಹೋ ಸಾಂಬಾ… ಹಿಂಗ್ಯಾಕೆ ಆಯ್ತು. ಕಿತನೇ ಆದ್ಮಿ ತೇ ಎಂದು ಗಬ್ಬರ್​ ಸಿಂಗ್​ ಸಾಂಬಾನನ್ನು ಕೇಳುತ್ತಾನೆ. ಚುನಾವಣೆಯಲ್ಲಿ ಎಷ್ಟು ಜನ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದರೆ ಅವರ ಪುತ್ರ ಪ್ರಿಯಾಂಕ್​ ಖರ್ಗೆ ಸೇರಿ ಇತರ ಶಾಸಕರು ಇದ್ದರು. ನಾವು ಇಬ್ಬರೇ ಇದ್ದೆವು ಎಂದು ಶೋಲೆ ಸಿನಿಮಾದ ಪ್ರಖ್ಯಾತಿ ಪಡೆದ ದೃಶ್ಯದ ತುಣುಕನ್ನು ರಾಜಕೀಯ ನಾಯಕರಿಗೆ ಹೋಲಿಸಿ ವ್ಯಂಗ್ಯವಾಗಿ ಹೇಳುತ್ತಾರೆ.

ಗಬ್ಬರ್ ಸಿಂಗ್​ ರೀತಿ​ ಆಡಳಿತ ಮಾಡುತ್ತಿದ್ದ ಖರ್ಗೆ ಸೋಲಿಸಲು ಚಾಣಕ್ಯನಂತೆ ನಾನು ಅಮಿತಾಬ್​ ಬಚ್ಚನ್​​ ನಂತೆ, ಧರ್ಮೇಂದ್ರನಂತೆ ಚಿಂಚನಸೂರು ಪ್ರಮಾಣ ಮಾಡಿದೆವು, ಅದರಂತೆ ಸೋಲುಣಿಸಿದೆವು. ಖರ್ಗೆ ಚೇಲಾಗಳು ಎಷ್ಟು ದುಡ್ಡು ಚೆಲ್ಲಿದರೂ ಅವರು ಗೆಲ್ಲಲಾಗಿಲ್ಲ. ದುರ್ಯೋಧನನ ಕ್ಷೇತ್ರ ಚಿತ್ತಾಪುರದಲ್ಲೇ ಖರ್ಗೆಗೆ ಅವರು ಲೀಡ್ ಕೊಡಲಾಗಿಲ್ಲ ಎಂದು ಕುಹುಕವಾಡಿದರು.

ಖರ್ಗೆ ಸೋಲಿಸುವ ಮೂಲಕ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ವನಾಶ ಮಾಡಿ, ಬಿಜೆಪಿಯನ್ನು ಗೆಲ್ಲಿಸಿದ್ದೇವೆ ಎಂದರು.

Comments are closed.