ಕರ್ನಾಟಕ

ಅಣ್ಣಾಮಲೈ ರಾಜೀನಾಮೆಗೆ ಕಾರಣ ಬಿಚ್ಚಿಟ್ಟ ದಕ್ಷ ಅಧಿಕಾರಿ

Pinterest LinkedIn Tumblr


ಬೆಂಗಳೂರು: ಇತ್ತೀಚೆಗೆ ಪೊಲೀಸ್​ ಹುದ್ದೆಗೆ ಕರ್ನಾಟಕ ಸಿಂಗಂ ಎಂದೇ ಕರೆಸಿಕೊಳ್ಳುತ್ತಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಅಣ್ಣಾಮಲೈ ಅವರಿಗೆ ಇಂದು ಹುಟ್ಟುಹಬ್ಬ. ಪ್ರಾಮಾಣಿಕ, ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ ಅವರ ಹುಟ್ಟು ಹಬ್ಬಕ್ಕೆ ನಗರದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಶುಭಾಶಯ ಪತ್ರ ಬರೆದಿದ್ದಾರೆ.

ಎರಡು ಪುಟಗಳ ಪತ್ರ ಬರೆದಿರುವ ರವಿ ಡಿ. ಚನ್ನಣ್ಣನವರ್, ಅಣ್ಣಾಮಲೈ ಅವರು ರಾಜೀನಾಮೆ ನೀಡಲು ಕಾರಣ ಏನಿರಬಹುದು? ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ನಾವಿರುವ ಪರಿಸ್ಥಿತಿಯಲ್ಲಿ ಜ್ಞಾನಿಗಳು, ಅನುಭವಸ್ಥರಿಗೆ ನನ್ನ ಜೊತೆ ಬೇರೆಯವರು ಬೆಳೆಯಲಿ ಎಂಬ ಸದಾಶಯ ಇರುವುದಿಲ್ಲ ಎಂದಿರುವ ಅವರು, ಅಣ್ಣಾಮಲೈ ರಾಜೀನಾಮೆಗೆ ಬೇರೆಯದ್ದೇ ಕಾರಣ ಇದೆ ಎಂಬಂತೆ ಪರೋಕ್ಷವಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲಿ ಏನಿದೆ?:

ಸದ್ಯ ನಾವಿರುವ ಈ ಪ್ರಸ್ತುತದಲ್ಲಿ ಜ್ಞಾನಿಗಳಿಗೆ ಕೊರತೆಯಿಲ್ಲ, ಶ್ರೀಮಂತರಿಗೂ ಕೊರತೆ ಇಲ್ಲ, ವಿಷಯವನ್ನರಿತವರಿಗೆ ಕೊರತೆ ಇಲ್ಲ, ಎಲ್ಲವನ್ನೂ ಬಲ್ಲವರಿಗೂ ಕೊರತೆಯೇ ಇಲ್ಲ. ಆದರೆ, ಅರ್ಜಿಸಿದ ಜ್ಞಾನ, ಪಡೆದ ತಿಳುವಳಿಕೆ, ಗಳಿಸಿದ ಅನುಭವಗಳನ್ನು ಸಮಾಜದ ಒಳಿತಿಗಾಗಿ ತಾನು ಬದುಕಿ ಇತರರು ಬದುಕಲಿ ಎಂಬ ಅಶಯ ಹೊತ್ತವರು, ನನ್ನ ಜೊತೆ ಇತರರೂ ಬೆಳೆಯಲಿ ಎಂಬ ಸದಾಶಯವನ್ನು ಹೊಂದಿರುವ ಮನಸ್ಸುಗಳ ಕೊರತೆ ಇದೆ. ನಾನು ಬೆಳೆಯದೇ ಹೋದರೂ ಪರವಾಗಿಲ್ಲ, ಇನ್ನೊಬ್ಬ ಬೆಳೆಯುತ್ತಿದ್ದಾನೆ, ಬದುಕುತ್ತಿದ್ದಾನೆ, ಅವನ ಪಾಡಿಗೆ ಅವನನ್ನು ಬಿಟ್ಟು ಬಿಡೋಣ ಎಂಬ ಔದಾರ್ಯದ ಕೊರತೆಯಿದೆ .
– ರವಿ ಡಿ.ಚನ್ನಣ್ಣನವರ್

ಈ ಮೇಲಿನ ಸಾಲುಗಳು ಬರೆದಿರುವರ ವಿ ಡಿ.ಚನ್ನಣ್ಣನವರ್, ಪೊಲೀಸ್ ಇಲಾಖೆಯಲ್ಲಿ ಅಣ್ಣಾಮಲೈ ತರಹದ ಮನಸ್ಸುಗಳು ಬೆಳೆಯಲು ಬಿಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಿದೆ. ಇನ್ನು’ಇತರರಿಗಾಗಿ ಮಿಡಿಯುವ ಆ ಮನಸ್ಸು ನಿನ್ನಲ್ಲಿದೆ. ಎಲ್ಲಾ ವರ್ಗದ ಎಲ್ಲಾ ಹಂತದ ಜನರ ನಾಯಕ ನೀನಾಗಬೇಕೆಂಬುದು ನನ್ನ ಸದಾಶಯ’ ಎಂದು ಹೇಳುವ ಮುಖೇನ ಅಣ್ಣಾಮಲೈ ರಾಜೀಯಕ್ಕೆ ಹೋಗಲಿದ್ದಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಹಾಗೆಯೇ “ಈಗ ರಾಜ್ಯದ ಜನ ನಿನ್ನ ರಾಜೀನಾಮೆ ಅರಗಿಸಿಕೊಳ್ಳಲು ಶ್ರಮಪಡುತ್ತಿದ್ದಾರೆ. ರಾಜೀನಾಮೆ ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ, ಪೊಲೀಸ್ ಸೇವೆಯಲ್ಲಿ ಮುಂದುವರಿಯಬೇಕೆಂದು ಆಶಿಸುತ್ತಿದ್ದಾರೆ. ಅವರು ನೀನು ರಾಜೀನಾಮೆಯ ಬಗ್ಗೆ ಕೊಟ್ಟ ಕಾರಣಗಳನ್ನು ನಂಬಲೂ ಸಹ ಹಿಂದೆ ಮುಂದೆ ನೋಡುತ್ತಿದ್ದಾರೆ,” ಎಂದು ಪತ್ರದಲ್ಲಿ ಪ್ರಸ್ತಾಪ ಮಾಡಿರುವ ಸಾಲುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇದೇ ವೇಳೆ “ಇಡೀ ಇಲಾಖೆಯ ತುಂಬಾ ನೀನು ಆವರಿಸಿದ್ದು, ಪ್ರೀತಿ, ಮಮಕಾರ, ಆತ್ಮೀಯತೆ, ಗೌರವಗಳಿಂದ ಪೊಲೀಸ್ ಇಲಾಖೆಯ ಸರ್ವ ಏಳಿಗೆಗೆ ಹಾಗೂ ಜನಪ್ರಿಯತೆಗೆ ಸಿಬ್ಬಂದಿಗಳೇ ಮೂಲ ಎಂಬುದನ್ನು ಅರಿತಿದ್ದೆ. ಅದು ಅತ್ಯಂತ ಶ್ರೇಷ್ಟ ಗುಣ. ಇಲಾಖೆಯನ್ನು ಬೆಳೆಸುತ್ತಿರುವುದು ಕೆಳ ಹಂತದ ಸಿಬ್ಬಂದಿ ಹಾಗೂ ಅವರ ಬೆವರಿನ ಪರಿಶ್ರಮ. ಅದಕ್ಕಾಗಿ ನಿನ್ನಲ್ಲೊಮ್ಮೆ ನನ್ನನ್ನು ಕಂಡಿದ್ದೆ. ಹಾಗಂತ ನಾನೂ ನಿನಗೆ ಸಾಟಿಯಿಲ್ಲ. ಅದೆಷ್ಟೋ ನನ್ನಂಥವರ ಒಟ್ಟು ಮೊತ್ತ ನೀನು,” ಎಂದು ತಮಗಿಂತ ಕಿರಿಯ ಅಧಿಕಾರಿಯನ್ನು ಹಾಡಿ ಹೊಗಳಿದ್ಧಾರೆ ರವಿ ಡಿ.ಚನ್ನಣ್ಣನವರ್.

Comments are closed.