ಕರ್ನಾಟಕ

ಹೊರಹೋಗಿ ಅಂತ ಹೇಳಿದೆ– ಮಾಧ್ಯಮಗಳ ವಿರುದ್ಧ ಸಾರಾ ಮಹೇಶ್ ಕಿಡಿ

Pinterest LinkedIn Tumblr


ಮಡಿಕೇರಿ: ಹೊರಹೋಗಿ ಅಂತ ಹೇಳಿದೆ, ನಿಮಗೆ ಕನ್ನಡ ಅರ್ಥ ಆಗಲ್ವಾ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್ ಪ್ರಶ್ನಿಸಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಮಡಿಕೇರಿ ಕೋಟೆ ಸಭಾಂಗಣದಲ್ಲಿ ಇಂದು ಕೊಡಗು ಜಿಲ್ಲಾ ಪ್ರಾಕೃತಿಕ ವಿಕೋಪ ಸಂತ್ರಸ್ತರ ಸಭೆ ಆಯೋಜನೆಗೊಂಡಿತ್ತು. ವಾರ್ತಾ ಇಲಾಖೆಯಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ಮಾಧ್ಯಮದ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಆರಂಭಕ್ಕೂ ಮುನ್ನ ಕುಳಿತ್ತಿದ್ದ ಮಾಧ್ಯಮದ ವ್ಯಕ್ತಿಗಳನ್ನು ಉದ್ದೇಶಿಸಿ, ಈಗ ಹೊರಗೆ ಹೋಗಿ. ನಾನು ಕರೆದಾಗ ಬನ್ನಿ ಎನ್ನುವ ಮೂಲಕ ದರ್ಪ ಮೆರೆದಿದ್ದಾರೆ.

ಈ ಹೇಳಿಕೆಯನ್ನು ಮಾಧ್ಯಮದವರು ಖಂಡಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಸಭೆಗೆ ತನ್ನದೆಯಾದ ರೀತಿ ನೀತಿಗಳಿವೆ. ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಹೊರಗೆ ಹೋಗಿ. ರಾತ್ರಿಯಾದರೂ ಸಭೆ ನಡೆಸಿ ಪ್ರತಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಹೇಳಿದರು.

ಸಚಿವ ಸಾ.ರಾ ಮಹೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೆ ಭಾರೀ ಭದ್ರತೆ ನೀಡಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಎಸ್‍ಪಿ ಡಿ.ಸುಮನ್ ಅವರು ಸಭೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಸಭೆ ನಡೆಸುತ್ತಿರುವ ಕೋಟೆ ಸಭಾಂಗಣದ ಸುತ್ತಲೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೇವಲ ಸಂತ್ರಸ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಸಂಸದ ಪ್ರತಾಪ್ ಸಿಂಹ ಅವರು ನನಗೂ ಈ ಸಭೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕುಳಿತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಬಳಿಕ ಗುರುವಾರ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದರು. ಈಗ ಸಾರಾ ಮಹೇಶ್ ಸಹ ಸಿಎಂ ಅವರ ನಡೆಯನ್ನು ಅನುಸರಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

Comments are closed.