ಕರ್ನಾಟಕ

ಜುಲೈ 30ಕ್ಕೆ ವಿಪ್ರೋ ಸ್ಥಾಪಕ ಅಝೀಂ ಪ್ರೇಮ್ ಜಿ ರಾಜೀನಾಮೆ

Pinterest LinkedIn Tumblr


ನವದೆಹಲಿ: ಭಾರತದ ಎರಡನೇ ಅತೀ ದೊಡ್ಡ ಶ್ರೀಮಂತ ಉದ್ಯಮಿ ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ, ತಮ್ಮ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಜುಲೈ 30ಕ್ಕೆ ರಾಜೀನಾಮೆ ನೀಡಲಿದ್ದಾರೆ. ಜತೆಗೆ ಕಾರ್ಯ ನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಲಿರುವ ಇವರು, ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಈ ಜಾಗಕ್ಕೆ ಅಝೀಂ ಪ್ರೇಮ್ ಜಿ ಅವರ ಪುತ್ರ ರಿಶಾದ್ ನೂತನ ಕಾರ್ಯಕಾರಿ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ ಎಂದು ವಿಪ್ರೋ ತಿಳಿಸಿದೆ.

ಅಝೀಂ ಪ್ರೇಮ್ ಜಿ ವಿಶ್ವದ ಪ್ರಸಿದ್ಧ ಉದ್ಯಮಿ. ಇವರು ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೇ ಕೊಡುಗೈ ದಾನಿಯೆಂದೇ ಖ್ಯಾತಿಯಾಗಿದ್ದ ಬಿಲ್ ಗೇಟ್ಸ್ ಕೂಡ ಟ್ವಿಟರ್ ಮೂಲಕ ಪ್ರೇಮ್ ಜಿ ಅವರನ್ನು ಹೊಗಳಿದ್ದಾರೆ. “ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಅವರು ತೋರಿರುವ ಸತತ ಬದ್ಧತೆ ನನಗೆ ಸ್ಫೂರ್ತಿ ನೀಡಿದೆ. ಅವರ ಇತ್ತೀಚಿಗಿನ ಕೊಡುಗೆ ಅಮೋಘ ಪರಿಣಾಮ ಬೀರಲಿದೆ”ಟ್ವೀಟ್ ಮಾಡಿದ್ದರು.

ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಅಝೀಂ ಪ್ರೇಮ್ ಜಿ (73) ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಖಾಸಗಿ ಸಂಪತ್ತಿನ ಹೆಚ್ಚಿನ ಭಾಗವನ್ನು ಅಝೀಂ ಪ್ರೇಮ್ ಜಿ ಫೌಂಡೇಶನ್​​ನ ದತ್ತಿ ನಿಧಿಗೆ ಸಮರ್ಪಿಸಿದ್ದರು. ಅವರ ಒಡೆತನದ ಹಲವು ಸಂಸ್ಥೆಗಳ ನಿಯಂತ್ರಣದಲ್ಲಿರುವ ವಿಪ್ರೋ ಕಂಪನಿಯ 52,750 ಕೋಟಿ ರೂ. ಮೌಲ್ಯದ ಶೇ 34ರಷ್ಟು ಶೇರುಗಳನ್ನು ಸಮಾಜಕ್ಕೆ ಉಪಯುಕ್ತ ಕಾರ್ಯಗಳಿಗೆ ಅವರು ಮುಡಿಪಾಗಿಸಿದ್ದಾರೆ.

ತಾವು ಈ ಹಿಂದೆಯೇ ದಾನವಾಗಿ ನೀಡಿರುವ ವಿಪ್ರೋ ಶೇರುಗಳು ಹಾಗೂ ಇತರ ಸಂಪತ್ತಿನ ಹೊರತಾಗಿ ಅವರು ಈ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅಝೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ನಿಗೆ ಒಟ್ಟು 1.45 ಲಕ್ಷ ಕೋಟಿ ರೂ. ದಾನ ಮಾಡಿದಂತಾಗಿದ್ದು, ವಿಪ್ರೋದ ಒಟ್ಟು ಶೇ 67ರಷ್ಟು ಶೇರುಗಳನ್ನೂ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

Comments are closed.