ಕರ್ನಾಟಕ

ಅಪಾಯದಲ್ಲಿ ಬೆಂಗಳೂರು; ಈ ಆರು ಪ್ರದೇಶಗಳಲ್ಲಿ ವಿಷವಾಗಿರುವ ಗಾಳಿ!

Pinterest LinkedIn Tumblr

ಬೆಂಗಳೂರು: ಗಾರ್ಡನ್​ ಸಿಟಿ ಎಂಬ ಹೆಸರನ್ನು ಕಳಚಿಕೊಂಡು ಸಿಲಿಕಾನ್​ ಸಿಟಿಯಾಗಿರುವ ರಾಜಧಾನಿಯಲ್ಲಿ ಜನ ಶುದ್ಧ ಗಾಳಿಗಾಗಿ ಪರದಾಡುವ ದಿನ ದೂರವಿಲ್ಲ.

ದಿನೇ ದಿನೇ ಕ್ಷೀಣಿಸುತ್ತಿರುವ ಮರ, ಹೆಚ್ಚುತ್ತಿರುವ ಕಲುಷಿತ ಗಾಳಿಯಿಂದಾಗಿ ನಗರದಲ್ಲಿ ಉಸಿರಾಡಲು ಶುದ್ದ ಗಾಳಿ ಸಿಗದೇ ಜನರು ಪರದಾಡುತ್ತಿದ್ದಾರೆ. ಅದರಲ್ಲಿ ರಾಜಧಾನಿಗಳ ಈ ಕೆಲವು ಸ್ಥಳಗಳು ಅಪಾಯದ ಅಂಚಿನಲ್ಲಿದ್ದು, ಜನರು ಆಕ್ಸಿಜನ್​ ಮಾಸ್ಕ್​ ಮೊರೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿರುವಂತೆ ಈಗಾಗಲೇ ನಗರದ ಈ 6 ಸ್ಥಳಗಳಲ್ಲಿ ಗಾಳಿ ವಿಷವಾಗಿದ್ದು, ಇದನ್ನು ಉಸಿರಾಡಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.

2012-13 ರಿಂದ 6 ವರ್ಷಗಳ ಕಾಲ ಗಾಳಿಯ ಗುಣಮಟ್ಟ ಅಳೆದಿರುವ ಕೆಎಪಿಸಿಬಿ ನಗರದ 6 ಸ್ಥಳಗಳಲ್ಲಿ ಉಸಿರಾಡಬೇಕು ಎಂದರೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಅಥವಾ ಮಾಸ್ಕ್​ ಹಾಕಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.

ನಗರದ 16 ಕಡೆಗಳಲ್ಲಿ ವಾಯು ಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 6 ಸ್ಥಳಗಳಲ್ಲಿ ಉಸಿರಾಡಲು ಉತ್ತಮ ವಾತಾವರಣವಿಲ್ಲ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಿಳಿಸಿದೆ.

ಈ ಭಾಗಗಳಲ್ಲಿ ಉಸಿರಾಡುವಾಗ ತೇಲಲ್ಪಡುವ ಧೂಳಿನ ಕಣಗಳು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಕೆಎಸ್ ಪಿಸಿಬಿ ತಿಳಿಸಿದೆ. ಈ ಧೂಳಿನ ಕಣಗಳು ನಮಗೆ ಅರಿವಿಲ್ಲದಂತೆಯೇ ದೇಹಕ್ಕೆ ಸೇರುತ್ತಿದ್ದು ಅಪಾಯಕಾರಿ ರೋಗಗಳು ಬರುವ ಸಾಧ್ಯತೆಯಿದೆ. ಈ ರೀತಿಯ ಅಶುದ್ಧ ಗಾಳಿ ಸೇವನೆಯಿಂದ ಅಸ್ತಮಾ, ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವವರ ಆರೋಗ್ಯ ಮತ್ತಷ್ಟು ಹಾಳಾಗುವ ಸಾಧ್ಯತೆಯಿದೆ.

ಆ ಅಪಾಯಕಾರಿ ಸ್ಥಳಗಳು ಯಾವುವು ಗೊತ್ತಾ?

ಮೈಸೂರು ರಸ್ತೆಯ ಆಮ್ಕೊ ಬ್ಯಾಟರಿ ಫ್ಯಾಕ್ಟರಿ, ಇಲ್ಲಿನ ವಾಯುಗುಣಮಟ್ಟ ಸೂಚ್ಯಂಕ 39 ರಿಂದ 180

ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕ 113 ರಿಂದ 159

ಯಲಹಂಕದ ರೈಲ್ವೇ ವೀಲ್ ಫ್ಯಾಕ್ಟರಿ ಪ್ರದೇಶದ ವಾಯುಗುಣಮಟ್ಟ ಸೂಚ್ಯಂಕ 106 ರಿಂದ 155

ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕ 103 ರಿಂದ 130

ಪೀಣ್ಯ ಅರ್ಬನ್ ಇಕೋಪಾರ್ಕ್ ಬಳಿ ವಾಯು ಗುಣಮಟ್ಟದ ಸೂಚ್ಯಂಕ 95 ರಿಂದ 124

ದೊಮ್ಮಲೂರಿನ ಟೆರಿ ಕಚೇರಿ ಬಳಿ ವಾಯು ಗುಣಮಟ್ಟದ ಸೂಚ್ಯಂಕ 44 ರಿಂದ 122

ನಗರದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಇರೋ ಸ್ಥಳವೆಂದರೆ ಅದು ಹೊಸೂರು ರಸ್ತೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಆಗಿದೆ. ಹೆಚ್ಚಿನ ವಾಹನಗಳ ಓಡಾಟ, ಮೆಟ್ರೊ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳು, ರಸ್ತೆಯಲ್ಲಿ ಸರಿಯಾಗಿ ಸ್ವಚ್ಛ ಮಾಡದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ತೇಲಲ್ಪಡುವ ಧೂಳಿನ ಕಣಗಳು ಹೆಚ್ಚಾಗಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.

ಯಾವುದೇ ಒಂದು ಪ್ರದೇಶದಲ್ಲಿ ನಾವು ಉಸಿರಾಡುವ ಗಾಳಿಯ ಸೂಚ್ಯಂಕ 0ರಿಂದ 50 ಇದ್ದರೆ ಅದು ಶುದ್ಧ ಗಾಳಿಯಾಗಿರುತ್ತದೆ. 51ರಿಂದ 100ರ ಒಳಗೆ ಇದ್ದರೆ ಅದು ಸಮಾಧಾನಕರವಾಗಿರುತ್ತದೆ. ಇದನ್ನು ಮೀರಿದ ಗಾಳಿ ವಿಷಯುಕ್ತವಾಗಿರುತ್ತದೆ. ಈಗ ಬೆಂಗಳೂರಿನ ಆರು ಪ್ರದೇಶಗಳಲ್ಲಿ ಇಂತಹ ಗಾಳಿ ಬೀಸುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಮೀಕ್ಷೆ ಹೇಳುತ್ತದೆ.

ಸದಾ ಟ್ರಾಫಿಕ್​ನಿಂದ ಗಿಚಿಗುಡುವ ಈ ಸ್ಥಳಗಳಲ್ಲಿ ಜನರು ಈಗಾಗಲೇ ಹೈರಾಣಾಗುತ್ತಿದ್ದಾರೆ. ನಗರದಲ್ಲಿ ಸಾರ್ವಜನಿಕ ಸಾರಿಗೆಗೆ ಸರ್ಕಾರ ಹೆಚ್ಚಿನ ಒತ್ತು ಕೊಡಬೇಕು ಇಲ್ಲವಾದರೆ ಯಾವುದೇ ಪ್ರಯೋಜನವಾಗಲ್ಲ ಎಂದು ಹೇಳುತ್ತಾರೆ ನಗರ ತಜ್ಞ ನರೇಶ್ ನರಸಿಂಹನ್.

ಹೆಚ್ಚು ವಾಯುಮಾಲಿನ್ಯ ಪ್ರಮಾಣವಿರುವ ಸ್ಥಳಗಳಲ್ಲಿ ಮನೆ ಮಾಡಿದವರು, ಬೇರೆಡೆ ಹೋಗಲು ಆಗದೆ, ಉಸಿರಾಡಲು ಉತ್ತಮ ವಾತಾವರಣವೂ ಇಲ್ಲದೆ ತೊಂದರೆ ಪಡ್ತಿದ್ದಾರೆ. ಕೆಎಸ್ ಪಿಸಿಬಿ ನೀಡಿರುವ ವಾಯುಮಾಲಿನ್ಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ.

Comments are closed.