ಬೆಂಗಳೂರು: ರಾಜಧಾನಿ ಹಾಗೂ ಸುತ್ತಮುತ್ತ ಇವತ್ತು ಭಾರೀ ಮಳೆಯಾಗುತ್ತಿದೆ. ಬೆಂಗಳೂರು, ಮಂಡ್ಯ, ಆನೇಕಲ್, ಹಾಸನ, ಮೈಸೂರು ಮೊದಲಾದ ಕಡೆ ವರುಣನ ಆರ್ಭಟ ಜೋರಾಗಿದೆ. ಗಾಂಧಿನಗರ, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಎಂಜಿ ರಸ್ತೆ, ನೀಲಸಂದ್ರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಕೋರಮಂಗಲ, ಶೇಷಾದ್ರಿಪುರಂ ಸೇರಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ಶಾಂತಿನಗರ ಮೊದಲಾದ ಪ್ರದೇಶಗಳು ಜಲಾವೃತಗೊಂಡಿವೆ. ವಾಹನ ಸಂಚಾರದ ದಟ್ಟನೆಯಾಗಿದೆ.
ಮಳೆಗಾಳಿಯ ರಭಸಕ್ಕೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ನಗರದಲ್ಲಿ ಹಲವು ಕಡೆ ಸ್ಥಳದಲ್ಲಿ ಮರಗಳು ಬಿದ್ದು ವಾಹನ ಸಂಚಾರ ಜಖಂಗೊಂಡಿವೆ.
ಇತ್ತೀಚೆಗಷ್ಟೇ ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಚಲಿಸುತ್ತಿದ್ದ ಕಾರ್ ಮೇಲೆ ಮರ ಬಿದ್ದ ಘಟನೆಯಾಗಿದೆ. ರಾಬಿನ್ ಮತ್ತು ವಿಜಯಾ ದಂಪತಿಯ ಮಗ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಹಾಗೆಯೇ ಶಾಂತಿನಗರದ ಮುಖ್ಯರಸ್ತೆಯಲ್ಲಿ ಬೃಹತ್ ಮರ ಉರುಳಿದ ಪರಿಣಾಮ ಅಕ್ಕ ಪಕ್ಕದಲ್ಲಿದ್ದ ಎರಡು ವಿದ್ಯುತ್ ಕಂಬಗಳೂ ನೆಲಸಮಗೊಂಡಿದ್ದವು. ವಿದ್ಯುತ್ ತಂತಿ ತುಂಡರಿದು ಫೂಟ್ಪಾತ್ನಲ್ಲಿ ಚೆಲ್ಲಾಡಿದೆ. ಈ ಮೂಲಕ ರಸ್ತೆ ಬದಿಯಲ್ಲಿ ಓಡಾಡುವ ಜನರು ಆತಂಕಕ್ಕೊಳಗಾದ ಕ್ಷಣಗಳು ಎದುರಾದವು. ಘಟನೆ ನಡೆದು ಒಂದು ಗಂಟೆಯಾದರೂ ಬೆಸ್ಕಾಮ್, ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸದಿದ್ದುದು ಸ್ಥಳೀಯರಿಗೆ ಅಕ್ರೋಶ ತಂದಿತ್ತು.
ಇನ್ನು ಶೀಘ್ರದಲ್ಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಬಳಿಕ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಮಾನ್ಯದಿಂದ ಭಾರೀ ಮಳೆ ಸಾಧ್ಯತೆ ಎಂದು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.