ಕರ್ನಾಟಕ

ರಾಮಲಿಂಗಾ ರೆಡ್ಡಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕರು; ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ

Pinterest LinkedIn Tumblr


ಬೆಂಗಳೂರು; ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಆರಂಭವಾಗಿದ್ದ ಮೈತ್ರಿ ಸರ್ಕಾರದ ಸಚಿವ ಸಂಪುಟ ಸಭೆ ವಿಸ್ತರಣೆ ಪ್ರಕ್ರಿಯೆಯಿಂದಾಗಿ ಹುಟ್ಟಿಕೊಂಡ ರಮೇಶ್ ಜಾರಕಿಹೊಳಿ ಅಂಡ್​ ಟೀಮ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವನ್ನು ಅಕ್ಷರಶಃ ಕಂಟಕದಂತೆ ಕಾಡಿದ್ದು ಸುಳ್ಳಲ್ಲ. ಇದೀಗ ಚುನಾವಣೆಯ ನಂತರ ನಡೆಯಲಿರುವ ಸಂಪುಟ ವಿಸ್ತರಣೆಯೂ ಸಹ ರಾಮಲಿಂಗಾರೆಡ್ಡಿ ಅಂಡ್ ಟೀಮ್ ಎಂಬ ಮತ್ತೊಂದು ಅಸಮಾಧಾನಿತರ ಗುಂಪಿನ ಹುಟ್ಟಿಗೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.

ರಾಜ್ಯ ಕಾಂಗ್ರೆಸ್ ಪಾಲಿಗೆ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಟ್ರಬಲ್ ಶೂಟರ್ ಎಂದು ಕರೆದರೆ, ಬೆಂಗಳೂರು ಕಾಂಗ್ರೆಸ್ ಪಾಲಿಗೆ ರಾಮಲಿಂಗಾ ರೆಡ್ಡಿ ನಿಜವಾದ ಟ್ರಬಲ್ ಶೂಟರ್ ಆಗಿದ್ದರು. ಬೆಂಗಳೂರು ನಗರ ಭಾಗದಲ್ಲಿ ಪಕ್ಷದೊಳಗಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರಿಗೆ ಸಾರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಮೈತ್ರಿ ಸರ್ಕಾರದಲ್ಲಿ ಅವರಿಗೆ ಮಂತ್ರಿಗಿರಿ ಅವಕಾಶವನ್ನು ತಪ್ಪಿಸಲಾಗಿತ್ತು.

ಕಾಂಗ್ರೆಸ್ ಪಕ್ಷದೊಳಗಿನ ಈ ಬೆಳವಣಿಗೆಯಿಂದಾಗಿ ಅಸಮಾಧಾನಗೊಂಡಿದ್ದ ರಾಮಲಿಂಗಾ ರೆಡ್ಡಿ, “ಪಕ್ಷದೊಳಗೆ ನಿನ್ನೆ ಮೊನ್ನೆ ಬಂದವರಿಗೆ ಮಣಿಹಾಕಿರೋದು ಎಷ್ಟು ಸರಿ? ಹಿರಿಯರ ಕಡೆಗಣನೆ ಸರಿಯಲ್ಲ. ಪಕ್ಷದೊಳಗೆ ಹಿರಿಯರಿಗೆ ಆಗುತ್ತಿರುವ ತಪ್ಪನ್ನು ಕೂಡಲೇ ಸರಿಪಡಿಸಿ” ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಪರಿಸ್ಥಿತಿ ಹೀಗೆ ಮುಂದುವರಿದರೆ ಪಕ್ಷವನ್ನೇ ತ್ಯಜಿಸುವ ಸೂಚನೆಯನ್ನೂ ನೀಡಿದ್ದರು.

ಈ ಕುರಿತು ರಾಮಲಿಂಗಾ ರೆಡ್ಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಂತೆ ಕಾಂಗ್ರೆಸ್ ಒಳಗೆ ಮತ್ತಷ್ಟು ಭಿನ್ನಮತಗಳು ಕೇಳಿಬರಲು ಆರಂಭಿಸಿದೆ. ಅಲ್ಲದೆ ಕೆಲವರು ರಾಮಲಿಂಗಾ ರೆಡ್ಡಿ ಬೆಂಬಲಕ್ಕೆ ನಿಂತಿರುವುದು ಪಕ್ಷದ ಹಿರಿಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾಂಗ್ರೆಸ್ ಪಕ್ಷದೊಳಗೆ ಹಿರಿಯ ನಾಯಕರಿಗೆ ಅನ್ಯಾಯವಾಗುತ್ತಿರುವುದನ್ನು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಖಂಡಿಸುತ್ತಿದ್ದಂತೆ ಅವರ ಮಾತಿಗೆ ಪಕ್ಷದೊಳಗೆ ಮತ್ತಷ್ಟು ಜನರ ದನಿಗೂಡಿದೆ. ಬೆಂಬಲ ಹೆಚ್ಚಾಗತೊಡಗಿದೆ ಪರಿಣಾಮ ಪಕ್ಮಷದೊಳಗೆ ಮತ್ತೊಂದು ಭಿನ್ನಮತೀಯರ ತಂಡ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.

ರಾಮಲಿಂಗಾ ರೆಡ್ಡಿ ಪರ ಈಗಾಗಲೇ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಕೆಪಿಸಿಸಿ ಕಚೇರಿಯ ಎದುರು ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, “ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿರುವ ಇಬ್ಬರು ಪಕ್ಷೇತರ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಿನಿಯಾರಿಟಿಗೆ ಬೆಲೆ ಇಲ್ವ, ಬೆಂಗಳೂರಲ್ಲಿ ಪಕ್ಷ ಸಂಘಟನೆಗೆ ರಾಮಲಿಂಗಾರೆಡ್ಡಿ ಅವರ ಪ್ರಯತ್ನ ಹೆಚ್ಚಿದೆ.

ಬಿಬಿಎಂಪಿ ಪಾಲಿಕೆ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದ ಶ್ರೇಯ ರಾಮಲಿಂಗಾರೆಡ್ಡಿ ಅವರದ್ದು, ಅಂತವರನ್ನು ಗೌರವಯುತವಾಗಿ ನಡೆಸಿಕೊಳ್ತಿಲ್ಲ. ಹೀಗಾಗಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡದಿದ್ದರೆ ನಾವು ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ಈ ಕುರಿತು ಎಲ್ಲ ಕಾರ್ಪೋರೇಟರ್​ಗಳು ಪ್ರತಿಭಟನಾ ಸಭೆ ನಡೆಸಲು ಸಹ ತೀರ್ಮಾನಿಸಿದ್ದೇವೆ” ಎಂದು ಕಾಂಗ್ರೆಸ್ ನಾಯಕರಿಗೆ ಮಂಜುನಾಥ್​ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಸಹ ರಾಮಲಿಂಗಾ ರೆಡ್ಡಿ ಬೆಂಬಲಕ್ಕೆ ನಿಂತಿದ್ದು, “ರಾಮಲಿಂಗಾ ರೆಡ್ಡಿ ಪಕ್ಷದ ನಿಷ್ಠಾವಂತ ನಾಯಕ. ಕಷ್ಟಪಟ್ಟು ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದಾರೆ. ಅಂತವರಿಗೆ ಅನ್ಯಾಯವಾಗಿರೋದನ್ನು ನಾನು ಸೇರಿದಂತೆ ಪಕ್ಷದ ಅನೇಕ ನಿಷ್ಠಾವಂತ ಶಾಸಕರು ಒಪ್ಪುವುದಿಲ್ಲ. ಹೀಗಾಗಿ ಈ ಬಾರಿಯ ಸಚಿವ ಸಂಪುಟದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಭಿನ್ನಮತೀಯ ರಮೇಶ್ ಜಾರಕಿಹೊಳಿ ಅಂಡ್​ ಟೀಮ್ ಪಕ್ಷದೊಳಗೆ ಸೃಷ್ಟಿಸಿರುವ ತಲ್ಲಣವನ್ನು ತಣಿಸುವ ಮುನ್ನವೇ ಮತ್ತೊಂದು ಭಿನ್ನಮತೀಯ ಕೂಗು ಕೇಳಿ ಬರುತ್ತಿರುವುದು ರಾಮಲಿಂಗಾ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರ ಕಾಂಗ್ರೆಸ್​ ಹೈಕಮಾಂಡ್​ಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಮೈತ್ರಿ ಸರ್ಕಾರದ ಉಭಯ ಪಕ್ಷಗಳ ಒಳಗೆ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾದರೂ ಅಚ್ಚರಿ ಇಲ್ಲ.

Comments are closed.