ಕರ್ನಾಟಕ

ರೇಷ್ಮಾ ಪಡೆಕನೂರ ಕೊಲೆ ಪ್ರಕರಣಕ್ಕೆ ಹೊಸ ತಿರುವು

Pinterest LinkedIn Tumblr


ಬೆಂಗಳೂರು: ವಿಜಯಪುರ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೆಕನೂರ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಮುಖ ಆರೋಪಿ ತೌಫಿಕ ಶೇಖ್ ಉರ್ಫ್ ಪೈಲ್ವಾನ್ ನೀಡಿದ್ದ ಹೇಳಿಕೆ ಈಗ ಎಲ್ಲ ಕಡೆ ವೈರಲ್​ ಆಗಿದೆ. ಆತ ತನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನನ್ನ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹೇಳಿದ್ದಾನೆ.

ಬಂಧನಕ್ಕೂ ಮೊದಲು ತೌಫಿಕ ಹೇಳಿಕೆಯೊಂದನ್ನು ನೀಡಿದ್ದ. ಈ ವೇಳೆ ಆತ ಕೊಲೆಯಲ್ಲಿ ನನ್ನ ಪಾತ್ರ ಇಲ್ಲ ಎನ್ನುವ ವಿಚಾರವನ್ನು ಹೇಳಿದ್ದಾನೆ. “ಮೇ 17ರಂದು ರೇಷ್ಮಾ ಪಡೆಕನೂರ ಕೊಲೆ ನಡೆದ ದಿನ ನಾನು ಪ್ರಕಾಶ ಅಂಬೇಡ್ಕರ ಅವರ ಜೊತೆಯಲ್ಲಿ ಪ್ರಚಾರದಲ್ಲಿದ್ದೆ. ಈ ವಿಷಯ ಪೊಲೀಸರಿಗೂ ಗೊತ್ತಿದೆ,” ಎನ್ನುವ ಮೂಲಕ ತೌಫಿಕ್​ ಅಚ್ಚರಿ ಮೂಡಿಸಿದ್ದಾನೆ.

ರಾಜಕೀಯ ದುದ್ದೇಶದಿಂದ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ ಎಂಬುದು ತೌಫಿಕ್​ ಆರೋಪ. “ಕೊಲೆ ನಡೆದ ದಿನ ನಾನೆಲ್ಲಿದ್ದೆ ಎಂಬುದು ಪೊಲೀಸರಿಗೂ ಗೊತ್ತಿದೆ ಎಂದಮೇಲೆ ನನ್ನನ್ನೇಕೆ ಬಂಧಿಸಿದ್ದಾರೆ? ಶೀಘ್ರವೇ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ‌. ಈ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ನನ್ನನ್ನು ಬಂಧಿಸಿದ್ದರ ಹಿಂದೆ ರಾಜಕೀಯ ಷಡ್ಯಂತರವಿದೆ,” ಎಂದಿದ್ದಾನೆ ತೌಫಿಕ್​.

ಇನ್ನು, ತೌಫಿಕ್​ ಅಲ್ಲಾ ಹಾಗೂ ಭಾರತದ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ನಾನು ಬಿಡುಗಡೆ ಆಗುತ್ತೇನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಮೇ 17ರಂದು ರೇಷ್ಮಾ ಕೊಲೆ ನಡೆದಿತ್ತು. ವಿಜಯಪುರ ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ಮೃತದೇಹ ಪತ್ತೆಯಾಗಿತ್ತು. ಕೊಲೆ ಸಂಬಂಧ ಸೊಲ್ಲಾಪುರದ ತೌಫಿಕ್​ ಇಸ್ಮಾಯಿಲ್ ಶೇಖ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದ ರೇಷ್ಮಾ ಪತಿ ಖಾಜಾಬಂದೇನವಾಜ ಪಡೇಕನೂರ ಪೊಲೀಸ್​ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು.

ಈ‌ ಮೊದಲು ಜೆಡಿಎಸ್ ಜಿಲ್ಲಾಧ್ಯಕ್ಷೆ ಆಗಿದ್ದ ರೇಷ್ಮಾ ಪಡೇಕನೂರ, ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್​ನಿಂದ ಸ್ಪರ್ಧಿಸಿ ಸೋತಿದ್ದರು. ಕಳೆದ ಚುನಾವಣೆಯಲ್ಲಿ ವಿಜಯಪುರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

Comments are closed.