ಕರ್ನಾಟಕ

ಮತ್ತೊಂದು ಮಹತ್ವದ ಹುದ್ದೆ ಮೇಲೆ ಬಿಜೆಪಿ ಕಣ್ಣು

Pinterest LinkedIn Tumblr


ಬೆಂಗಳೂರು: ಮುಂಬರುವ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಧಿಕಾರ ಹಿಡಿಯಲು ಈಗಿನಿಂದಲೇ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಾಲಿಕೆಯ ಎರಡು ವಾರ್ಡ್‌ನ ಉಪಚುನಾವಣೆಯಲ್ಲಿ ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಬಿಜೆಪಿಗೆ ಎರಡು ಸ್ಥಾನ ಹೆಚ್ಚಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಸಂಖ್ಯಾಬಲ ಕುಸಿದಿದೆ. ಹೀಗಾಗಿ, ಬಿಜೆಪಿ ಕೊನೆಯ ವರ್ಷವಾದರೂ ಮೇಯರ್‌ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಲೆಕ್ಕಚಾರ ಆರಂಭಿಸಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಮುಖಂಡರೂ ಮ್ಯಾಜಿಕ್‌ ಸಂಖ್ಯೆ ತಲುಪುವುದಕ್ಕೆ ತಯಾರಿ ಆರಂಭಿಸಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಗಳೂರಿನಲ್ಲಿ ಮತದಾನದ ಹಕ್ಕು ಹೊಂದಿರುವ ವಿಧಾನ ಪರಿಷತ್‌ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಲಾಗುತ್ತಿದೆ. ಅದರಂತೆ ಜೆಡಿಎಸ್‌ ಎಂಎಲ್‌ಸಿ ತಿಪ್ಪೇಸ್ವಾಮಿ, ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್‌ ಸೇರಿ ಇತರರು ಮುಂದಿನ ಮೇಯರ್‌ ಚುನಾವಣೆಯಲ್ಲಿ ಮತದಾರರಾಗಲಿದ್ದಾರೆ.

ಏಳು ಮತಕ್ಕೆ ಆಪರೇಷನ್‌:

ಬಿಜೆಪಿಯ ಪಾಲಿಕೆ ಸದಸ್ಯರು, ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ಸೇರಿ ಒಟ್ಟು 125 ಮತದಾರರಿದ್ದಾರೆ. ಮ್ಯಾಜಿಕ್‌ ಸಂಖ್ಯೆಗೆ 7 ಮತಗಳು ಕಡಿಮೆಯಾಗಲಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಸದಸ್ಯರನ್ನು ಸೆಳೆಯಲು ತಯಾರಿ ನಡೆಸಲಾಗಿದೆ. ಈಗಾಗಲೇ ಜೆಡಿಎಸ್‌ನ ಮಂಜುಳಾ ನಾರಾಯಣ ಸ್ವಾಮಿ, ದೇವದಾಸ್‌, ಪಕ್ಷೇತರ ಸದಸ್ಯ ರಮೇಶ್‌ ನೇರವಾಗಿ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದಾರೆ. ಅವರು ಮುಂದಿನ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವುದು ಪಕ್ಕಾ ಆಗಿದೆ. ನಾಲ್ಕು ಮತಗಳು ಅವಶ್ಯಕವಾಗಿದೆ.

ಮ್ಯಾಜಿಕ್‌ ಸಂಖ್ಯೆಗೆ ಬಿಜೆಪಿ ಕತ್ತರಿ ಯತ್ನ?

ಮೇಯರ್‌ ಮತ್ತು ಉಪಮೇಯರ್‌ ಮತದಾರರ ಪಟ್ಟಿಯಲ್ಲಿ 262 ಜನ ಮತದಾರರಿದ್ದಾರೆ. ಅದರಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚಿನ ಒಂದು ಮತವನ್ನು ಮ್ಯಾಜಿಕ್‌ ಸಂಖ್ಯೆ ಎಂದು ನಿರ್ಧರಿಸಲಾಗುತ್ತದೆ. ಅದರಂತೆ ಸದ್ಯದ ಮಟ್ಟಿಗೆ ಮ್ಯಾಜಿಕ್‌ ಸಂಖ್ಯೆ132 ಆಗಿದೆ. ಬಿಜೆಪಿ ಮ್ಯಾಜಿಕ್‌ ಸಂಖ್ಯೆಯ ಗುರಿಯನ್ನೇ ಕಡಿಮೆ ಮಾಡುವ ನಿಟ್ಟಿನಲ್ಲಿ ತಂತ್ರ ರೂಪಿಸುತ್ತಿದೆ. ಅದಕ್ಕಾಗಿ ಕಾಂಗ್ರೆಸ್‌ನ ಅತೃಪ್ತ ಸದಸ್ಯರು ಚುನಾವಣೆ ವೇಳೆ ಗೈರಾಗುವಂತೆ ಮಾಡಲು ಎಲ್ಲ ತಂತ್ರವನ್ನು ಹೆಣೆಯಲಾಗಿದೆ. ಒಂದು ವೇಳೆ ಸದಸ್ಯರು ಗೈರಾದರೆ ಮ್ಯಾಜಿಕ್‌ ಸಂಖ್ಯೆ ತನ್ನಿಂದ ತಾನೇ ಕಡಿಮೆಯಾಗಲಿದೆ. ಆ ಮೂಲಕ ಬಿಜೆಪಿಯ ಮೇಯರ್‌ ಅಭ್ಯರ್ಥಿಗೆ ಗೆಲುವು ಸುಲಭವಾಗಲಿದೆ ಎಂಬುದು ಬಿಜೆಪಿ ತಂತ್ರವಾಗಿದೆ.

ಪಕ್ಷೇತರರ ಮತವೇ ಅಂತಿಮ

ಒಟ್ಟು 8 ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಅದರಲ್ಲಿ ಮಮತಾ ಶರವಣ ಬಿಜೆಪಿ ಸೇರ್ಪಡೆಯಾಗಿದ್ದರು. ಉಳಿದ 7 ಸದಸ್ಯರು ಮೈತ್ರಿ ಪಕ್ಷಗಳಿಗೆ ಬೆಂಬಲ ನೀಡಿದ್ದರು. 2018ರ ಮೇಯರ್‌ ಚುನಾವಣೆ ವೇಳೆ ರಮೇಶ್‌ ಬಿಜೆಪಿ ಜತೆಗೆ ಗುರುತಿಸಿಕೊಳ್ಳುವ ಮೂಲಕ ಪಕ್ಷೇತರ ಸದಸ್ಯರ ಸಂಖ್ಯೆ 6ಕ್ಕೆ ಕುಸಿದಿತ್ತು. ಅದರ ನಡುವೆ ಪಕ್ಷೇತರ ಸದಸ್ಯ ಏಳು ಮಲೈ ನಿಧನರಾಗಿದ್ದು, ಅವರ ವಾರ್ಡ್‌ನಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಮೈತ್ರಿಪರ ಐದು ಮತ ಬೀಳುವ ಸಾಧ್ಯತೆ ಇದೆ. ಉಳಿದೆರಡು ಬಿಜೆಪಿ ಪರ ಬೀಳಲಿವೆ.

ಮತದಾರರ ಲೆಕ್ಕಾಚಾರ

ಕಾಂಗ್ರೆಸ್‌

ಬಿಬಿಎಂಪಿ ಸದಸ್ಯರು: 76

ಲೋಕಸಭಾ ಸದಸ್ಯ: 01

ರಾಜ್ಯಸಭಾ ಸದಸ್ಯರು: 06

ಶಾಸಕರು: 15

ವಿಧಾನಪರಿಷತ್‌ ಸದಸ್ಯರು: 10

ಒಟ್ಟು: 108

ಜೆಡಿಎಸ್‌

ಬಿಬಿಎಂಪಿ ಸದಸ್ಯರು: 14

ರಾಜ್ಯಸಭಾ ಸದಸ್ಯರು: 01

ಶಾಸಕರು: 02

ವಿಧಾನಪರಿಷತ್‌ ಸದಸ್ಯರು: 05

ಒಟ್ಟು: 22

ಬಿಜೆಪಿ

ಬಿಬಿಎಂಪಿ ಸದಸ್ಯರು: 101

ಲೋಕಸಭಾ ಸದಸ್ಯ: 04

ರಾಜ್ಯಸಭಾ ಸದಸ್ಯರು: 02

ಶಾಸಕರು: 11

ವಿಧಾನಪರಿಷತ್‌ ಸದಸ್ಯರು: 07

ಒಟ್ಟು: 125

–ಪಕ್ಷೇತರರು–

ಬಿಬಿಎಂಪಿ ಸದಸ್ಯರು: 07

ಒಟ್ಟು: 07

ಒಟ್ಟು ಮತದಾರರು: 262

ಮ್ಯಾಜಿಕ್‌ ಸಂಖ್ಯೆ: 132

ದೋಸ್ತಿ ಪಕ್ಷಗಳ ಒಟ್ಟು ಸಂಖ್ಯಾ ಬಲ

ಕಾಂಗ್ರೆಸ್‌-108

ಜೆಡಿಎಸ್‌-22

ಒಟ್ಟು-130

Comments are closed.