ಕರ್ನಾಟಕ

ದೇವೇಗೌಡರ ಪರ ಹಂಚಿದ ಹಣ ಬಿಜೆಪಿ ಅಭ್ಯರ್ಥಿಗೆ ಅನುಕೂಲ: ಕಾಂಗ್ರೆಸ್​ ವರದಿ

Pinterest LinkedIn Tumblr


ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಜೆಡಿಎಸ್​ ಸರ್ವೋಚ್ಚ ನಾಯಕ ದೇವೇಗೌಡ ಪರವಾಗಿ ಮತ ಹಾಕುವಂತೆ ನೀಡಿದ ಹಣ ಮೈತ್ರಿ ಅಭ್ಯರ್ಥಿ ಬದಲಿಗೆ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಿದೆ ಎಂಬ ವಿಷಯ ತುಮಕೂರು ಜಿಲ್ಲಾ ಕಾಂಗ್ರೆಸ್​ ಹೈಕಮಾಂಡ್​ಗೆ ನೀಡಿದ ವರದಿಯಲ್ಲಿ ಬಹಿರಂಗವಾಗಿದೆ.

ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ನಾಯಕರ ಆಂತರಿಕ ಕಚ್ಚಾಟ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಹಲವು ನಾಯಕರ ಹೆಸರನ್ನು ಉಲ್ಲೇಖಿಸಲಾಗಿದೆ. ಮತ್ತು ಅವರೆಲ್ಲಾ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್​ ಪತ್ರಿಕೆ ವರದಿ ಮಾಡಿದೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ 2500 ಮತದಾನವಾಗಿದ್ದ ಮಧುಗಿರಿಯಲ್ಲಿ ಬಿಜೆಪಿ ಈಗ ಹೆಚ್ಚು ಮತಗಳನ್ನು ಪಡೆದುಕೊಂಡಿದೆ ಎಂಬ ಪ್ರಾಥಮಿಕ ಅಂಶವನ್ನು ವರದಿಯಲ್ಲಿ ತಿಳಿಸಲಾಗಿದೆ.

ಕ್ಷೇತ್ರಗಳಿಗೆ ಭೇಟಿ ನೀಡಿ ಮತ್ತು ಮತದಾರರಿಂದ ಮಾಹಿತಿ ಕಲೆಹಾಕಿ ವರದಿಯನ್ನು ತಯಾರಿಸಲಾಗಿದೆ ಎಂದು ಸ್ಥಳೀಯ ನಾಯಕರು ಹೇಳುತ್ತಾರೆ.

ತುಮಕೂರು ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಇಬ್ಬರು ಪ್ರಭಾವಿ ರಾಜಕಾರಣಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ಲಿಂಗಾಯತ ಸಮುದಾಯಕ್ಕೆ ಸೇರಿದ ಜಿ.ಎಸ್.ಬಸವರಾಜು ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಸೋಲಿಸಿದರು.

ಹಾಸನವನ್ನು ಮೊಮ್ಮಗನಿಗೆ ಧಾರೆ ಎರೆದು ದೇವೇಗೌಡರು ಕೊನೇ ಕ್ಷಣದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧೆ ಮಾಡಿದ್ದರು. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ದೇವೇಗೌಡರು ಹೇಳಿದ್ದರು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

ದೇವೇಗೌಡರು ಕೊನೇ ಕ್ಷಣದಲ್ಲಿ ತುಮಕೂರಿನಿಂದ ಸ್ಪರ್ಧೆ ಮಾಡಿದ ಕಾರಣಕ್ಕೆ ಈ ಕ್ಷೇತ್ರದ ಹಾಲಿ ಸಂಸದರಾಗಿದ್ದ ಕಾಂಗ್ರೆಸ್​ನ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆನಂತರ ಒತ್ತಾಯದ ಬಳಿಕ ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಆದರೆ, ಟಿಕೆಟ್ ತಪ್ಪಿಸಿದರು ಎಂಬ ಆಂತರಿಕ ಅಸಮಾಧಾನ ಅಲ್ಲಿನ ಸ್ಥಳೀಯ ಕಾಂಗ್ರೆಸ್​ ನಾಯಕರಿಗೆ ಇತ್ತು. ಇದೇ ಕಾರಣದಿಂದ ಕೆಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಪರವಾಗಿ ಮಾಡಿದರು ಎಂದು ವರದಿ ಹೇಳಿದೆ.

Comments are closed.