ಕರ್ನಾಟಕ

ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು; ವ್ಯಾಪಕ ವಿರೋಧ…!

Pinterest LinkedIn Tumblr


ಬಳ್ಳಾರಿ(ಮೇ 28): ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು,ಕುರೆಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಹಾಗೂ ಸಂಡೂರು ತಾಲೂಕಿನ ಮೂಸನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಭೂಮಿಯನ್ನ ಜೆಎಸ್​ಡಬ್ಲೂ ಸ್ಟೀಲ್ ಸಂಸ್ಥೆಗೆ ಶುದ್ದ ಕ್ರಯಪತ್ರಗಳನ್ನ ಮಾಡಿಕೊಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೊಮೋದನೆ ನೀಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಿಂದಾಲ್ ಕಂಪನಿ ಲೀಸ್ ಆಫ್ ಅಗ್ರಿಮೆಂಟ್ ಮೂಲಕವೇ ಮುಂದುವರಿಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶುದ್ದಕ್ರಯ ಪತ್ರಗಳನ್ನ ಮಾಡಿಕೊಡಲು ರಾಜ್ಯ ಸರ್ಕಾರ ಅನುಮೋದನೆ ನೀಡಬಾರದು ಅನ್ನೋ ಒತ್ತಾಯಗಳು ಕೇಳಿಬರುತ್ತಿವೆ.

ಜಿಂದಾಲ್ ಕಂಪನಿ ಪರವಾಗಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇಷ್ಟೊಂದು ಪ್ರಮಾಣದ ಭೂಮಿಯನ್ನ ನೀಡಲು ಮುಂದಾಗಿರುವುದು ಸಿಎಂ ನಡೆ ಅನುಮಾನಕ್ಕೆ ಕಾರಣವಾಗಿದೆ. ಅಪಾರ ಪ್ರಮಾಣದ ಬೆಲೆಬಾಳುವ ಭೂಮಿಯನ್ನ ಕಡಿಮೆ ಬೆಲೆಗೆ ಜಿಂದಾಲ್ ಕಂಪನಿಗೆ ನೀಡುವುದು ಎಷ್ಟರ ಮಟ್ಟಿಗೆ ಸರಿ? ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಮಾಡಿದ ಅನುಮೋದನೆಯನ್ನ ವಾಪಾಸ್ ಪಡೆಯಬೇಕು. ಇಲ್ಲದಿದ್ರೆ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ ಅಂತಿದ್ದಾರೆ ಕರ್ನಾಟಕ ಜನಸೈನ್ಯ ರಾಜ್ಯಾಧ್ಯಕ್ಷ ಕೆ.ಯರಿಸ್ವಾಮಿ.

2014-19ರ ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 99 ವರ್ಷಗಳ ಅವಧಿಗೆ ಲೀಸ್ ಆಧಾರದಲ್ಲಿ ಸರ್ಕಾರ ಅಥವಾ ಸರ್ಕಾರ ವಶಪಡಿಸಿಕೊಂಡ ಜಮೀನನ್ನ ಒದಗಿಸುವ ಅವಕಾಶ ಇದೆ. ಶುದ್ದ ಕ್ರಯಪತ್ರಗಳನ್ನ ತಡೆಯುವ ಉದ್ದೇಶದಿಂದ ಈ ನೀತಿ ಜಾರಿಗೊಳಿಸಲಾಗಿದೆ. ಸರ್ಕಾರಗಳು ಈ ನೀತಿ ಪಾಲಿಸಿದ್ರೆ ಅಪಾರ ಪ್ರಮಾಣದ ಸಾರ್ವಜನಿಕ ಸ್ವತ್ತು ಖಾಸಗಿಯವರ ಪಾಲಾಗುವುದು ತಪ್ಪುತ್ತದೆ. ಆದ್ರೆ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 1 ಎಕರೆಗೆ ಕೇವಲ 1.22 ಲಕ್ಷ ರೂ ಗಳ ಶುದ್ದಕ್ರಯ ಪತ್ರ ಮಾಡಿಕೊಡುವ ನಿರ್ಣಯ ಎಷ್ಟರ ಮಟ್ಟಿಗೆ ಸರಿ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಇದೆ. ಇದನ್ನ ಅತ್ಯಂತ ಕಡಿಮೆ ದರದಲ್ಲಿ ಸರ್ಕಾರ ಶುದ್ದಕ್ರಯ ಪತ್ರ ನೀಡಿರುವುದು ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಹೀಗಾಗಿ ಸರ್ಕಾರ ಈ ನಿರ್ಣಯವನ್ನ ವಾಪಾಸ್ ಪಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಜಿಂದಾಲ್ ಕಂಪನಿಗೆ ಸಾವಿರಾರು ಎಕರೆ ಜಮೀನಿಗೆ ಶುದ್ದಕ್ರಯ ಪತ್ರ ನೀಡಿರುವ ಸಿಎಂ ಕುಮಾರಸ್ವಾಮಿಯ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸ್ವತ: ಮೈತ್ರಿ ಸರ್ಕಾರದ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ನಿರ್ಧಾರವನ್ನ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ದ ಸ್ಥಳೀಯವಾಗಿಯೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಸಾಕಷ್ಟು ಗದ್ದಲ ಎಬ್ಬಿಸಲಿದೆ.

Comments are closed.