ನವದೆಹಲಿ: ಪಶ್ಚಿಮಬಂಗಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮುಕುಲ್ ರಾಯ್ ಅವರ ಮಗ ಸುಭ್ರಾಂಗ್ಶು ಅವರೊಂದಿಗೆ ತೃಣಮೂಲ ಕಾಂಗ್ರೆಸ್ನ ಇಬ್ಬರು ಶಾಸಕರು ಮತ್ತು 50 ಮಂದಿ ಕೌನ್ಸಿಲರ್ಗಳು ಇಂದು ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹಿನ್ನಡೆಯಾಗಿದೆ.
ದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಕುಲ್ ರಾಯ್ ಮತ್ತು ರಾಜ್ಯ ಉಸ್ತುವಾರಿ ಕೈಲಾಶ್ ವಿಜಯ್ ವಾರ್ಗಿಯಾ, ಬಿಜ್ಪುರ್ ಟಿಎಂಸಿ ಶಾಸಕ ಸುಭ್ರಾಂಶ್ಶು ರಾಯ್, ಬಿಶ್ನಾಪುರ್ ಶಾಸಕ ತುಷಾರ್ ಕಾಂತಿ ಭಟ್ಟಾಚಾರ್ಯ ಮತ್ತು ಸಿಪಿಐ (ಎಂ) ಶಾಸಕ ಹೆಮ್ಟಾಬಾದ್ ದೆಬೇಂದ್ರನಾಥ್ ರಾಯ್ ಸೇರಿದಂತೆ 50 ಮಂದಿ ಕೌನ್ಸಿಲರ್ಗಳು ಇಂದು ಕೇಸರಿ ಪಕ್ಷ ಸೇರಿದ್ದಾರೆ ಎಂದು ಘೋಷಿಸಿದರು.
ಸಿಎಂ ಮಮತಾ ಬ್ಯಾನರ್ಜಿ ಅವರ ಪಕ್ಷದ ಶಾಸಕರು ಲೋಕಸಭೆ ಚುನಾವಣೆ ನಂತರ ಪಕ್ಷ ತ್ಯಜಿಸಲಿದ್ದಾರೆ. ಸುಮಾರು 40 ಶಾಸಕರು ತಮ್ಮ ಸಂಪರ್ಕದಲ್ಲಿ ಇರುವುದಾಗಿ ಪ್ರಧಾನಿ ಮೋದಿ ಅವರು ದೀದಿಗೆ ಎಚ್ಚರಿಕೆ ನೀಡಿದ್ದರು. “ಮೇ 23ರ ನಂತರ ಬಂಗಾಳದಲ್ಲಿ ಕಮಲ ಅರಳಲಿದೆ. ದೀದಿ ನೋಡುತ್ತೀರಿ ನಿಮ್ಮ ಪಕ್ಷದ ಶಾಸಕರು ನಿಮ್ಮ ಪಕ್ಷ ತ್ಯಜಿಸಿ ಓಡಿಹೋಗುವುದನ್ನು. ನಿಮ್ಮ ಪಕ್ಷದ 40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ,” ಎಂದು ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು.
ಪಕ್ಷ ವಿರೋಧಿಯಾಗಿ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ಸುಭ್ರಾಂಶ್ಶು ಅವರನ್ನು ಆರು ವರ್ಷಗಳ ಕಾಲ ಟಿಎಂಸಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. “ಟಿಎಂಸಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿತ್ತು. ಈಗ ನಾನು ನಿರಾಳವಾಗಿ ಉಸಿರಾಡುತ್ತಿದ್ದೇನೆ ಎಂದು ಉಚ್ಚಾಟನೆ ಬಳಿಕ ಹೇಳಿದ್ದರು. ಅಲ್ಲದೇ, ಹಲವು ಮಂದಿ ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ,” ಎಂದು ಹೇಳಿದ್ದರು.