ಕರ್ನಾಟಕ

ಇಲ್ಲಿ ಪೊಲೀಸ್ ನಾಯಿಗಳಿಗೆ ಎಳನೀರು, ಮಜ್ಜಿಗೆ ಯಾಕೆ ಕೊಡುತ್ತಾರೆ ಗೊತ್ತಾ?

Pinterest LinkedIn Tumblr


ಬಳ್ಳಾರಿ: ಕಾದ ಕೆಂಡದಂತಿರುವ ಸೂರ್ಯನ ಪ್ರತಾಪಕ್ಕೆ ಗಣಿನಾಡು ಬಳ್ಳಾರಿ ಜನತೆ ಬಸವಳಿದು ಹೋಗಿದ್ದಾರೆ. ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನುಷ್ಯನ ಪಾಡೇ ಹೀಗಿದ್ದರೆ ನಾಯಿ ಪಾಡು ಇನ್ಹೇಗಿರುತ್ತೆ? ಅದಕ್ಕೆ ಬಳ್ಳಾರಿಯ ಪೊಲೀಸರು ತಮ್ಮ ಇಲಾಖೆಯ ನುರಿತ ನಾಯಿಗಳನ್ನು ಬಿಸಿಲಿನಿಂದ ತಣ್ಣಗಿಡಲು ನಿರ್ಧರಿಸಿದ್ದಾರೆ. ತತ್​ಪರಿಣಾಮವಾಗಿ ನಗರದ ಡಿಎಆರ್ ಮೈದಾನದ ಕೊಠಡಿಯಲ್ಲಿರುವ ವಿದೇಶಿ ತಳಿಯ ನಾಯಿಗಳಿಗೆ ರಾಯಲ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಅದು ಅನಿವಾರ್ಯವೂ ಹೌದು. ಯಾಕೆಂದರೆ ಬಳ್ಳಾರಿಯ ಬಿಸಿಲಿಗೆ ಈ ಜಾತಿಯ ಪೊಲೀಸ್ ನಾಯಿಗಳು ಬದುಕುಳಿಯುವುದು ಕಷ್ಟ. ಈ ಕಾರಣಕ್ಕೆ ಪೊಲೀಸರು ತಮ್ಮ ನಾಯಿಗಳಿಗೆ ಕೂಲರ್ ವ್ಯವಸ್ಥೆ ಮಾಡಿದ್ದಾರೆ.

ತಂಪು ಹವಾಮಾನ ಹೊಂದಿರುವ ಕೆನಡಾ ಮತ್ತು ಜರ್ಮನಿ ದೇಶಗಳ ಡಾಬರ್ಮನ್ ಪಿಂಚರ್, ಲ್ಯಾಬ್ರಡಾರ್ ತಳಿಯ ನಾಯಿಗಳಿಗೆ ಬಿಸಿಲು ತಡಿದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿರುವ ಆರು ಶ್ವಾನಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಕೂಲರ್ ವ್ಯವಸ್ಥೆ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆ ಹೇಳಿಕೇಳಿ ಬಿಸಿಲಿಗೆ ಫೇಮಸ್ಸು. ಪ್ರತಿದಿನ ಸರಾಸರಿ 42 ಡಿಗ್ರಿ ಉಷ್ಣಾಂಶವಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಬಳ್ಳಾರಿ ಜನತೆ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ್ದಾರೆ. ನಮಗಾದರೆ ಬೆವರಿನ ಮೂಲಕ ತಾಪಮಾನ ಕಡಿಮೆಯಾಗುತ್ತದೆ. ಆದರೆ ನಾಯಿಗಳು ತಮ್ಮ ಬಾಯಿ ಮೂಲಕ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುತ್ತವೆ. ಈ ಕಾರಣಕ್ಕೆ ಬೇಸಿಗೆ ಕಾಲದಲ್ಲಿ ಪೊಲೀಸ್ ವಿದೇಶಿ ತಳಿಯ ನಾಯಿಗಳಿಗೆ ಕೂಲರ್ ಅನಿವಾರ್ಯ. ಇನ್ನು ಇಲ್ಲಿಯ ನಾಯಿಗಳಿಗೆ ಪ್ರತಿದಿನ ಎಳನೀರು ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ ಧ್ರವ ಪದಾರ್ಥಗಳಾದ ಗ್ಲೂಕಾನ್ ಡಿ ಹಾಗೂ ಶಕ್ತಿವರ್ಧಕ ಪೇಯಗಳನ್ನು ನೀಡಲಾಗುತ್ತಿದೆ. ಜೊತೆಗೆ ರಾಗಿ ಮಾಲ್ಟ್ ಸೇರಿದಂತೆ ಇನ್ನಿತರ ದ್ರವರೂಪದ ಪದಾರ್ಥಗಳನ್ನ ಕೊಡಲಾಗುತ್ತಿದೆ.

ಪೊಲೀಸರ ಈ ಕ್ರಮವನ್ನು ಶ್ವಾನಪ್ರೇಮಿಗಳು ಸ್ವಾಗತಿಸಿದ್ದಾರೆ. ಪೊಲೀಸರ ನಾಯಿಗಳಿಗೆ ಬಿರು ಬಿಸಿಲಿನ್ನು ತಡೆಯುವ ಶಕ್ತಿಯಿರುವುದಿಲ್ಲ. ಬೇಸಿಗೆಯಲ್ಲಿ ಪೊಲೀಸರು ನಾಯಿಗಳಿಗೆ ಕೂಲರ್ ವ್ಯವಸ್ಥೆ ಮಾಡಿರುವುದು ಶ್ಲಾಘನೀಯವೆನ್ನುತ್ತಾರೆ ಶ್ವಾನಪ್ರೇಮಿ ನಿಖಿಲ್ ಅಯ್ಯರ್.

ಬಿಸಿಲಿನ ತಾಪಮಾನದಿಂದ ಕಡಿಮೆ ಮಾಡಲು ಮನುಷ್ಯರು ಎಸಿ, ಕೂಲರ್, ಮೊರೆ ಹೋದಂತೆ, ಪೊಲೀಸ್ ನಾಯಿಗಳಿಗೂ ಇದೇ ಸೌಲಭ್ಯ ಸಿಗುತ್ತದೆ. ಯಾವುದೇ ಅಪರಾಧ ಘಟನೆ ನಡೆದ್ರೂ ಅದನ್ನ ಪತ್ತೆ ಹಚ್ಚಲು ಈ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳ ಆರೋಗ್ಯದಲ್ಲಿ ಏರುಪೇರು ಆಗದಂತೆ ರಕ್ಷಣೆ ಮಾಡುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯವೇ ಸರಿ.

Comments are closed.