ಕರ್ನಾಟಕ

ಬಿಜೆಪಿ ಸೇರಲ್ಲ, ನನಗೆ ಜನಾಭಿಪ್ರಾಯ ಮುಖ್ಯ; ಸುಮಲತಾ ಅಂಬರೀಷ್

Pinterest LinkedIn Tumblr


ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಸೋಲಿಸಿದ ನಂತರ ಸುಮಲತಾ ಅಂಬರೀಶ್​ ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಹಾಗೂ ಹಿರಿಯ ನಾಯಕ ಎಸ್​ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಿಜೆಪಿ ಸೇರುವುದಿಲ್ಲ ಎನ್ನುವ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಸುಮಲತಾ, “ಪಕ್ಷೇತರ ಅಭ್ಯರ್ಥಿ ಯಾವುದೇ ಪಕ್ಷ ಸೇರುವ ಅವಕಾಶ ನಮ್ಮ ಕಾನೂನಿನಲ್ಲಿ ಇಲ್ಲ. ಹಾಗಾಗಿ ನಾನು ಯಾವುದಾದರೂ ಒಂದು ಪಕ್ಷಕ್ಕೆ ಬೆಂಬಲ ನೀಡಬಹುದಷ್ಟೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನನ್ನ ಪರ ನಿಂತಿತ್ತು. ಅವರಿಗೆ ಧನ್ಯವಾದ. ಮಂಡ್ಯ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ,” ಎಂದು ಸುಮಲತಾ ಹೇಳಿದ್ದಾರೆ. ಈ ಮೂಲಕ ಸುಮಲತಾ ಬಿಜೆಪಿ ಸೇರಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.

ಈ ವೇಳೆ ಅವರು ಸುಮಲತಾ ಬಿಜೆಪಿಗೆ ಧನ್ಯವಾದ ಹೇಳಿದ್ದಾರೆ. “ಸುನಾಮಿ ರೀತಿ ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ನಾನು ವೈಯಕ್ತಿಕವಾಗಿ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನನ್ನ ಗೆಲುವು ಒಂದು ರೀತಿ ಇತಿಹಾಸ. ಮಂಡ್ಯದ ಜನ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲಾ ಪಕ್ಷದವರು ನನ್ನ ಕೈಜೋಡಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ,” ಎಂದು ಅವರು ಹೇಳಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ನೇರವಾಗಿ ಸುಮಲತಾಗೆ ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ, ಸುಮಲತಾ ಪರ ಪ್ರಚಾರದಲ್ಲಿ ಬಿಜೆಪಿ ಕಾರ್ಯರ್ತರು ಪಾಲ್ಗೊಂಡಿದ್ದರು. ಮಂಡ್ಯ ಭಾಗದಲ್ಲಿ ಬಿಜೆಪಿ ಪ್ರಾಬಲ್ಯವೇನು ಹೊಂದಿಲ್ಲ. ಆದರೆ, ಸುಮಲತಾ ಪರ ಒಂದಷ್ಟು ಮತಗಳು ಬೀಳಲು ಬಿಜೆಪಿ ಬೆಂಬಲ ಸಹಕಾರಿಯಾಗಿತ್ತು. ಹಾಗಾಗಿ ಬಿಜೆಪಿಗೆ ಧನ್ಯವಾದ ಹೇಳುವ ನಿಟ್ಟಿನಲ್ಲಿ ಬೆಳಗ್ಗೆ ಬಿಎಸ್​ ಯಡಿಯೂರಪ್ಪ ಅವರ ನಿವಾಸಕ್ಕೆ ಸುಮಲತಾ ತೆರಳಿದ್ದರು.

Comments are closed.