ಕರ್ನಾಟಕ

ಬೆಂಗಳೂರಿನಲ್ಲಿ ಮುಂದುವರಿದ ಮಳೆಯ ಆರ್ಭಟ; ಧರೆಗುರುಳಿದ ಮರಗಳು

Pinterest LinkedIn Tumblr


ಬೆಂಗಳೂರು: ರಾಜಧಾನಿ ಹಾಗೂ ಸುತ್ತಮುತ್ತ ಇಂದುಕೂಡ ಭಾರೀ ಮಳೆಯಾಗುತ್ತಿದೆ. ಚಿತ್ರದುರ್ಗ, ತುಮಕೂರು ಮೊದಲಾದ ಕಡೆ ಇವತ್ತು ಸಂಜೆಯ ನಂತರ ವರುಣನ ಆರ್ಭಟವಾಗಿದೆ.

ಗಾಂಧಿನಗರ, ಕಾರ್ಪೊರೇಷನ್, ಕೆಆರ್ ಮಾರ್ಕೆಟ್, ಎಂಜಿ ರಸ್ತೆ, ನೀಲಸಂದ್ರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ, ಕೋರಮಂಗಲ, ಮಲ್ಲೇಶ್ವರಂ, ಶೇಷಾದ್ರಿಪುರಂ, ಮೈಸೂರು ರಸ್ತೆ, ಚಾಮರಾಜಪೇಟೆ ಸೇರಿದಂತೆ ಬೆಂಗಳೂರಿನ ಬಹುಭಾಗದಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ನಗರದ ಕೆಜಿ ರೋಡ್​ನಲ್ಲಿ ಒಂದೇ ಬಾರಿಗೆ ಬೃಹತ್ ಗಾತ್ರದ ಎರಡು ಮರ ರಸ್ತೆಗೆ ಉರುಳಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಮಂತ್ರಿ ಮಾಲ್ ಬಳಿಯು ಗಾಳಿಯ ರಭಸಕ್ಕೆ ಮರ ಮುರಿದು ಬಿದ್ದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್ ಸುತ್ತಮುತ್ತ ರೋಡಿನಲ್ಲಿ ನೀರು ತುಂಬಿಕೊಂಡಿದ್ದು ಮೈಸೂರು ಬ್ಯಾಂಕ್ ಸರ್ಕಲ್‌ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಿದೆ. ಇನ್ನು ಆನೇಕಲ್​ನಲ್ಲೂ ಬಿರುಗಾಳಿ ಸಹಿತ ಜೋರು ಮಳೆಯಾಗುತ್ತಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ನಿನ್ನೆ ರಾತ್ರಿ ಕೂಡ ಜೋರಾಗಿ ಮಳೆ ಸುರಿದಿದ್ದು ಗಾಳಿಯಿಂದಾಗಿ ಅನೇಕ ಮರಗಳು ಧರೆಗುರುಳಿದ್ದವು. ಇಂದು ಕೂಡಾ ಅದೇ ರಭಸದಲ್ಲಿ ಗಾಳಿ ಮಳೆ ಬರುತ್ತಿದ್ದು, ಮತ್ತಷ್ಟು ಮರಗಳು ನೆಲಕ್ಕುರುಳುವ ಸಾಧ್ಯತೆಯಿದೆ.

ಇನ್ನು ರಾಜಧಾನಿಯಲ್ಲಿ ಸಿಡಿಲು ಬರುವ ಸಾಧ್ಯತೆ ಹೆಚ್ಚಿದೆ ಎಂದು ಜನರು ಆದಷ್ಟು ಸುರಕ್ಷಿತ ಪ್ರದೇಶಗಳಲ್ಲಿ ಇರುವಂತೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಸೂಚನೆ ನೀಡಿದೆ. ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಸಿಡಿಲು ಹೆಚ್ಚಿದ್ದು, ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಎಚ್ಚರಿಕೆ ನೀಡಿದೆ.

ನಿನ್ನೆ ಸುರಿದ ಭಾರೀ ಮಳೆಗೆ ಮಲ್ಲೇಶ್ವರದ ಸ್ಯಾಂಕಿ ರಸ್ತೆ ಬಳಿ ಬೆಂಗಳೂರಿನ ಖ್ಯಾತ ರೇಡಿಯೋ ಜಾಕಿಯಾಗಿರುವ ಪಟ್​ಪಟಾಕಿ ಶೃತಿ ಅವರು ಇದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಶೃತಿ ಅವರ ತಾಯಿಯ ಕೈಗೆ ಗಾಯವಾಗಿದ್ದು, ಕಾರು ಜಖಂಗೊಂಡಿದೆ. ಇನ್ನು, ಶಿವಾನಂದ ಸರ್ಕಲ್ ಬಳಿ ಚಲಿಸುತ್ತಿದ್ದ ಬೆಂಜ್ ಕಾರಿನ ಮೇಲೂ ಮರ ಉರುಳಿ ಕಾರು ಜಖಂಗೊಂಡಿದೆ. ಕಾರಿನ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

Comments are closed.