ಮಂಡ್ಯ: ದೇಶದಲ್ಲಿ ಇಂದು ಲೋಕಸಮರದ ಫಲಿತಾಂಶ ಹೊರಬೀಳಲಿದೆ. ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಲೋಕಸಭೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದ್ದು, ಮಂಡ್ಯದ ಸಂಸದರು ಯಾರಾಗಲಿದ್ದಾರೆ ಎನ್ನುವುದು ಗೊತ್ತಾಗಲಿದೆ. ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರದ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಮಂಡ್ಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಎಲ್ಲರ ಚಿತ್ತ ಇದೀಗ ಮಂಡ್ಯದತ್ತ ನೆಟ್ಟಿದ್ದು ನಾಳೆ ಮಂಡ್ಯ ಕ್ಷೇತ್ರದ ಫಲಿತಾಂಶ ಏನಾಗಲಿದೆ ಎಂಬುವುದು ಗೊತ್ತಾಗಲಿದೆ. ಮಂಡ್ಯದ ಬಾಲಕರ ಮಹಾವಿದ್ಯಾಲಯದಲ್ಲಿ ನಾಳೆ ಬೆಳಿಗ್ಗೆ 8 ಗಂಟೆ ಮತ ಎಣಿಕೆ ಆರಂಭವಾಗಲಿದ್ದು, ಈಗಾಗಲೇ ಜಿಲ್ಲಾಡಳಿತ ಮತ ಎಣಿಕೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ.
14 ಕೊಠಡಿಗಳಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ, 1 ಕೊಠಡಿಯಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ. ಪ್ರತಿ ಮತ ಎಣಿಕೆ ಕೊಠಡಿಗಳಲ್ಲಿ ಕೇಂದ್ರಗಳಿಗೆ ತಲಾ 2 ರಂತೆ 28 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ ವೋಟ್ ಕೌಂಟ್ ಮಾಡಲಾಗದಿದ್ದರೆ ಕೊನೆಯಲ್ಲಿ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆಗಾಗಿ 117 ಮಂದಿ ಎಣಿಕೆ ಮೇಲ್ವಿಚಾರಕರು, 116 ಎಣಿಕೆ ಸಹಾಯಕರು, 134 ಸೂಕ್ಷ್ಮ ಮೇಲ್ವಿಚಾರಕರು ಸೇರಿ ಒಟ್ಟು367 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಮಂಡ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇನ್ನು ನಾಳೆ ಚುನಾವಣಾ ಫಲಿತಾಂಶ ಹೊರ ಬೀಳಲಿದ್ದು, ಫಲಿತಾಂಶದಿಂದ ಜಿಲ್ಲೆಯಲ್ಲಿ ಗಲಭೆಗಳಾಗುವ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಇದಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಇಂದಿನಿಂದ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿದ್ದಾರೆ. ಜೊತೆಗೆ ನಾಳೆ ಮತ್ತು ನಾಳಿದ್ದು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶವನ್ನು ಪೊಲೀಸ್ ಇಲಾಖೆ ಪರಿಪಾಲಿಸಲಿದ್ದು, ಇದರ ಜೊತೆ ಪೊಲೀಸ್ ಇಲಾಖೆ ಕೂಡ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ಸೂಕ್ಷ್ಮ ಸ್ಥಳಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದೆ. ಇದರ ಜೊತೆಗೆ ಭದ್ರತೆಗಾಗಿ 500 ಪೊಲೀಸರು, 400 ಪೊಲೀಸ್ ಅಧಿಕಾರಿಗಳು ಸೇರಿದಂತೆ ಬಿಎಸ್ಎಫ್, ಸಿಆರ್ಪಿಎಫ್ ಸೇರಿದಂತೆ ಡಿಎಆರ್ ತುಕುಡಿಗಳ ನಿಯೋಜನೆ ಮಾಡಿಕೊಳ್ಳಲಾಗಿದೆ. ನಾಳೆ ಫಲಿತಾಂಶದಲ್ಲಿ ಯಾರೇ ವಿಜಯ ಸಾಧಿಸಿದರೂ ಕೂಡ ವಿಜಯೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ನಿರ್ಬಂಧ ಹೇರಿದೆ.
ಒಟ್ಟಾರೆ ನಾಳಿನ ಮಂಡ್ಯ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ನಾಳೆ ಮಧ್ಯಾಹ್ನದ ವೇಳೆ ಪೂರ್ಣ ಪ್ರಮಾಣದ ಫಲಿತಾಂಶ ದೊರಕಲಿದೆ. ನೇರಾನೇರಾ ಹಣಾಹಣಿ ಇದ್ದು ತೀವ್ರ ಕುತೂಹಲ ಮೂಡಿಸಿರುವ ಮಂಡ್ಯದ ನೂತನ ಸಂಸದರು ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ.