ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೊಸ ಕಂಪನ ಸೃಷ್ಟಿಸಿದೆ. ಈ ಬಗ್ಗೆ ಮೈತ್ರಿ ನಾಯಕರಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ ರೋಷನ್ ಬೇಗ್ ಬಂಡಾಯ ಏಳುವ ಸೂಚನೆ ನೀಡಿದ್ದಾರೆ. ಸ್ವ ಪಕ್ಷದ ನಾಯಕರ ವಿರುದ್ಧವೇ ತೊಡೆತಟ್ಟುವ ಮೂಲಕ ಕಾಂಗ್ರೆಸ್ ನಾಯಕರ ಆತಂಕ ಹೆಚ್ಚಿಸಿದ್ದಾರೆ.
ಉರ್ದು ವಾಹಿನಿಯೊಂದರಲ್ಲಿ ಸೋಮವಾರ ಮಾತನಾಡಿದ್ದ ರೋಷನ್ ಬೇಗ್, “ಈ ಬಾರಿಯೂ ಎನ್ಡಿಎ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಎನ್ಡಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವುದು ಬಹುತೇಕ ನಿಶ್ಚಳ. ಈ ಸಮೀಕ್ಷೆಗಳ ಕುರಿತು ನನಗೇನು ಆಶ್ಚರ್ಯವಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ಮಾಡಲಿದೆ. ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅಗತ್ಯ ಬಿದ್ದರೆ ನಾನು ಪಕ್ಷ ತೊರೆಯಲು ಸಿದ್ಧ,” ಎಂದಿದ್ದರು.
ಅಷ್ಟೇ ಅಲ್ಲ, ಇದಕ್ಕೆ ಕಾರಣವಾದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ.
ಇದಾದ ಬೆನ್ನಲ್ಲೇ ಮಂಗಳವಾರವೂ ರೋಷನ್ ಬೇಗ್ ವಾಗ್ದಾಳಿ ಮುಂದುವರಿಸಿದ್ದರು. ಸುದ್ದಿಗೋಷ್ಠಿ ಕರೆಯುವ ಮೂಲಕ ಸ್ವ ಪಕ್ಷ ನಾಯಕರ ವಿರುದ್ಧವೇ ಅವರು ಟೀಕಾ ಪ್ರಹಾರ ನಡೆಸಿದ್ದರು. ಸಿದ್ದರಾಮಯ್ಯ ದುರಹಂಕಾರಿ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 79 ಸ್ಥಾನ ಗಳಿಸಲು ಸಿದ್ದರಾಮಯ್ಯನವರೇ ನೇರ ಕಾರಣ. ಅವರು ಲಿಂಗಾಯತ ಧರ್ಮದ ವಿಚಾರಕ್ಕೆ ಕೈ ಹಾಕಿದ್ದು ಪಕ್ಷದ ಪಾಲಿಗೆ ದುಬಾರಿಯಾಗಿತ್ತು. ಈ ನಿರ್ಣಯದಿಂದ ಪಕ್ಷ 25 ಸ್ಥಾನಗಳನ್ನು ಕಳೆದುಕೊಂಡಿತ್ತು. ಎಚ್ಡಿ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಸರ್ಕಾರ ನಡೆಸಲು ಬಿಡುತ್ತಿಲ್ಲ,” ಎಂದು ಆರೋಪಿಸಿದ್ದರು.
ಕಾಂಗ್ರೆಸ್ಗೆ ದುಬಾರಿ ಆಗಲಿದೆಯಾ ಬಂಡಾಯ ಬಿಸಿ:
ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟುತ್ತಲೇ ಇದೆ. ಈ ಮೊದಲು ರಮೇಶ್ ಜಾರಕಿಹೊಳಿ ಸೇರಿ ಕೆಲವು ಶಾಸಕರು ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದಾರೆ. ಈ ವೇಳೆ ಭಾರೀ ಹೈಡ್ರಾಮ ನಡೆದಿತ್ತು. ಈ ವೇಳೆ ಮೈತ್ರಿ ಸರ್ಕಾರ ಉರುಳಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ರೋಷನ್ ಬೇಗ್ ಕೂಡ ಬಂಡಾಯ ಎದ್ದಿರುವುದು ಕಾಂಗ್ರೆಸ್ಗೆ ದುಬಾರಿ ಆಗುವ ಲಕ್ಷಣ ಗೋಚರವಾಗಿದೆ. ಒಂದೊಮ್ಮೆ ರೋಷನ್ ಕೂಡ ಪಕ್ಷ ತೊರೆದರೆ ಕಾಂಗ್ರೆಸ್ ಸ್ಥಾನ ಮತ್ತಷ್ಟು ಕುಸಿಯಲಿದೆ.
ಮೈತ್ರಿ ಸರ್ಕಾರಕ್ಕೆ ಹೆಚ್ಚಿದ ತಳ-ಮಳ:
ಈಗಾಗಲೇ ಚುನಾವಣೋತ್ತರ ಸಮೀಕ್ಷೆಯಿಂದ ಮೈತ್ರಿ ಪಾಳಯದಲ್ಲಿ ಆತಂಕ ಮನೆ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ರಾಜ್ಯದಲ್ಲಿ ಬೆರಳೆಣಿಕೆ ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್ ಹೇಳಿದೆ. ಹಾಗಾಗಿ ಸರ್ಕಾರ ಪತನವಾಗುವ ಲಕ್ಷಣ ಗೋಚರವಾಗಿದೆ. ಹೀಗಿರುವಾಗ ರೋಷನ್ ಬೇಗ್ ಬಂಡಾಯ ಎದ್ದಿರುವುದು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆ ಇದೆ.
ನಿರ್ಣಾಯಕವಾಗಲಿದೆ ಉಪಚುನಾವಣೆ:
ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಎರಡೂ ಕ್ಷೇತ್ರಗಳು ಸರ್ಕಾರ ರಚನೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಲಿವೆ. ಒಂದೊಮ್ಮೆ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ, ಕಮಲದ ಬಲ 106ಕ್ಕೆ ಏರಿಕೆ ಆಗಲಿದೆ. ಈಗಾಗಲೇ ಪಕ್ಷೇತರರಿಬ್ಬರು ಬಿಜೆಪಿ ಪರವಾಗಿದ್ದಾರೆ. ಹಾಗಾಗಿ ಬಿಜೆಪಿ ಸ್ಥಾನ 108 ತಲುಪಲಿದೆ. ನಂತರ ಬಹುಮತ ಸಾಬೀತು ಮಾಡಲು ಬಿಜೆಪಿಗೆ ಬೇಕಿರುವುದು ಕೇವಲ 5 ಸ್ಥಾನಗಳು ಮಾತ್ರ. ಹಾಗಾಗಿ, ರೋಷನ್ ಬೇಗ್ ಬಂಡಾಯ ಬಿಜೆಪಿಗೆ ಲಾಭದಾಯಕವಾಗಲಿದೆ.
ಜೆಡಿಎಸ್ನಿಂದ ಬಿಜೆಪಿಗೆ ಬೆಂಬಲ?:
ಒಂದೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯವಾಗಿ ಸೋತರೆ ಪಕ್ಷದ ವರ್ಚಸ್ಸು ಉಳಿಸಿಕೊಳ್ಳಲು ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಸರ್ಕಾರ ರಚನೆಗೆ ಜೆಡಿಎಸ್ ಸಹಾಯ ಮಾಡಲು ಮುಂದಾಗಲಿದೆ ಎನ್ನಲಾಗುತ್ತಿದೆ.
ರೋಷನ್ ಬೇಗ್ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧ ರೋಷನ್ ಬೇಗ್ ಹೇಳಿಕೆಗೆ ಪಕ್ಷದ ಪ್ರಮುಖರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, “ಕೆಲವರ ಅನಾವಶ್ಯಕ ಹೇಳಿಕೆಗೆ ಈಗಲೇ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಇನ್ನೂ ಚುನಾವಣೋತ್ತರ ಸಮೀಕ್ಷೆ ಕುರಿತು ರೋಷನ್ ಬೇಗ್ ಈಗಲೇ ಹೇಳಿಕೆ ನೀಡುವ ಅಗತ್ಯ ಇರಲಿಲ್ಲ. ಮೇ.23ರವರೆಗೆ ಕಾದು ನೋಡಿ ನಂತರ ಮಾತನಾಡಬಹುದಿತ್ತು. ಮಾಧ್ಯಮಗಳ ಸಮೀಕ್ಷೆಗಳನ್ನು ಸುಳ್ಳು ಮಾಡುವ ರೀತಿ ಮೈತ್ರಿ ಪಕ್ಷ 18ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ” ಎಂದು ಭರವಸೆ ನೀಡಿದ್ದಾರೆ.