ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ 300ಕ್ಕಿಂತಲೂ ಹೆಚ್ಚು ಸ್ಥಾನ ನೀಡಿದ ಬೆನ್ನಲ್ಲೇ ಇವಿಎಂ ಬಗೆಗಿನ ಸಂಶಯ ವಿಪಕ್ಷಗಳಲ್ಲಿ ಮತ್ತಷ್ಟು ಹೆಚ್ಚಿದೆ. ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಿಸಿದ್ದವು. ಇದರ ಮುಂದುವರೆದ ಭಾಗವಾಗಿ ಇಂದು ದೆಹಲಿಯಲ್ಲಿ ಸಭೆ ಸೇರಿದ ವಿಪಕ್ಷಗಳ ನಾಯಕರು ಮಹತ್ವದ ನಿರ್ಧಾರ ತಳೆದಿದ್ಧಾರೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ, ಸಿಪಿಐ-ಸಿಪಿಐಎಂ, ಡಿಎಂಕೆ, ಎನ್ಸಿಪಿ ಸೇರಿದಂತೆ ಇತರ ಅಂಗ ಪಕ್ಷಗಳು ಇಂದು ದೆಹಲಿಯಲ್ಲಿ ಮಹತ್ವದ ಸಭೆ ಸೇರಿದ್ದರು. ಎಲ್ಲಾ ಪಕ್ಷಗಳ ನಾಯಕರೂ ಒಕ್ಕೊರಲಿನಿಂದ ಶೇ. 50ರಷ್ಟು ವಿವಿಪ್ಯಾಟ್ ಎಣಿಕೆಗೆ ಒತ್ತಾಯ ಮಾಡಿದ್ದಾರೆ.
ಸಭೆ ಬಳಿಕ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ತೆರಳಿದ ವಿಪಕ್ಷ ನಾಯಕರು, ಮನವಿ ಪತ್ರವನ್ನು ಸಲ್ಲಿಸಿದ್ಧಾರೆ. ಈ ಹಿಂದೆ ಇವಿಎಂ ಬಳಕೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ ಅಂಗಳಕ್ಕೆ ಹೋಗಿತ್ತು. ಆದರೆ ಸುಪ್ರೀಂ ಕೋರ್ಟ್ ಇವಿಎಂಗಳ ಮೇಲಿರುವ ಆರೋಪ ಮತ್ತು ಸಂಶಯವನ್ನು ಮಾನ್ಯ ಮಾಡಿರಲಿಲ್ಲ. ಇಂದು ಬೆಳಗ್ಗೆ ಕೂಡ ಎನ್ಜಿವೊ ಒಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಇದನ್ನೂ ಓದಿ: ‘ಸಿದ್ದರಾಮಯ್ಯ ದುರಹಂಕಾರಿ, ಗುಂಡೂರಾವ್ ಫ್ಲಾಪ್ ಶೋ ಅಧ್ಯಕ್ಷ’; ಸ್ವಪಕ್ಷೀಯರ ಕಾಲೆಳೆದ ಮಾಜಿ ಸಚಿವ ರೋಷನ್ ಬೇಗ್
ಇದೀಗ ಚುನಾವಣಾ ಆಯೋಗದ ಮೆಟ್ಟಿಲನ್ನು ವಿರೋಧ ಪಕ್ಷಗಳು ಹತ್ತಿದ್ದು, ಆಯೋಗ ಮನವಿಯನ್ನು ಅಂಗೀರಕರಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.