ಕರ್ನಾಟಕ

87ನೇ ಹುಟ್ಟು ಹಬ್ಬದ ಪ್ರಯುಕ್ತ ದೇವೇಗೌಡರಿಗೆ ಗಣ್ಯರ ಶುಭ ಹಾರೈಕೆ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹುಟ್ಟುಹಬ್ಬದ ಪ್ರಯುಕ್ತ ಶನಿವಾರ ಕುಟುಂಬ ಸಮೇತ ತಿರುಪತಿಯಲ್ಲಿ ವೆಂಕಟೇಶ್ವರನ ದರ್ಶನ ಪಡೆದರು.

86 ವರ್ಷ ಪೂರೈಸಿ 87ನೇ ವಸಂತಕ್ಕೆ ಕಾಲಿಡುತ್ತಿರುವ ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ತಿರುಪತಿಯಿಂದ ಬೆಂಗಳೂರಿಗೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸ್ವಾಗತಿಸಿ, ಅಲ್ಲೇ ಕೇಕ್‌ ಕಟ್‌ ಮಾಡಿ, ಹುಟ್ಟಹಬ್ಬದ ಶುಭಾಶಯ ಕೋರಿದರು.

ನಂತರ, ಪದ್ಮನಾಭನಗರ ನಿವಾಸಕ್ಕೆ ತೆರಳಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮೇಯರ್‌ ಗಂಗಾಂಬಿಕೆ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿ ಹಲವು ಗಣ್ಯರು ಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಆರೋಗ್ಯ ಹಾಗೂ ಆಯುಷ್ಯವನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ದೇವೇಗೌಡರ ಕೊಡುಗೆ ಮಹತ್ವದ್ದು. ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯತೀತರನ್ನು ಒಗ್ಗೂಡಿಸುವಲ್ಲಿ ಅವರ ಪಾತ್ರವನ್ನು ದೇಶ ಎಂದೂ ಮರೆಯದು.

ದೇವೇಗೌಡರ ನಡೆ ನನಗೆ ಸದಾ ಮಾರ್ಗದರ್ಶಿ. ಅವರ ಸಾಮಾಜಿಕ ಕಳಕಳಿ ನನಗೆ ಇಂದಿಗೂ ಆದರ್ಶ. ಅವರ ಹುಟ್ಟುಹಬ್ಬದ ದಿನದಂದು ಅವರ ಕೊಡುಗೆಯನ್ನು ಸ್ಮರಿಸುತ್ತೇನೆ. ಇಂದು ನಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜನ್ಮದಿನದ ಸಂದರ್ಭದಲ್ಲಿ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು.

ಇಂದು ಕುಟುಂಬದ ಸದಸ್ಯರೆಲ್ಲರೂ ಜತೆಯಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅವರ ಆಯುರಾರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದೆವು. ಅವರ ಅನುಭವ, ಮಾರ್ಗದರ್ಶನ ಪಕ್ಷಕ್ಕೆ ಹಾಗೂ ನಾಡಿಗೆ ಹೀಗೆ ಲಭ್ಯವಾಗಲಿ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Comments are closed.