ಕರ್ನಾಟಕ

ಮುಕ್ಕಾಲು ಪಾಲು ರಾಜ್ಯಕ್ಕೆ ಬರ: ಬೆಚ್ಚಿಬೀಳಿಸಿದೆ ವರದಿ

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣಾ ಬಿಸಿ ಒಂದು ಕಡೆ ಏರುತ್ತಿದ್ದರೆ, ರಾಜ್ಯದಲ್ಲಿ ನೀರಿನ ತತ್ವಾರ ಕೂಡ ಅಧಿಕವಾಗುತ್ತಿದೆ. ರಾಜ್ಯದಲ್ಲಿ ಅಣೆಕಟ್ಟುಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆರೆ, ಬಾವಿ, ಬೋರ್​ವೆಲ್​ಗಳು ಬತ್ತುತ್ತಿದ್ದು, ಜನರು ನೀರಿಗಾಗಿ ಹಾಹಾಕಾರ ನಡೆಸುವ ಪರಿಸ್ಥಿತಿ ಎದುರಾಗಿದೆ. ರಾಜ್ಯದ 3,122 ಪ್ರದೇಶಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದೆ ಎಂದು ರಾಜ್ಯ ಸರ್ಕಾರ ಕೂಡ ಘೋಷಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಂಗ್ರಹಿಸಿದ ದಾಖಲೆ ಪ್ರಕಾರ “ರಾಜ್ಯದಲ್ಲಿನ 176 ತಾಲೂಕುಗಳಲ್ಲಿ 138 ತಾಲೂಕು ಅಂತರ್ಜಲ ಮಟ್ಟ ಕೆಳಮಟ್ಟಕ್ಕೆ ಇಳಿದಿದೆ. ಅದರಲ್ಲಿಯೂ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಂಗಾರಪೇಟೆ ಮತ್ತು ಕೋಲಾರದ ಸ್ಥಿತಿ ಅತಿ ಕೆಟ್ಟದಾಗಿದೆ”.

ಸದಾ ನೀರಿನ ಸಮಸ್ಯೆ ಎದುರಿಸುವ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇಲ್ಲಿ ಸದ್ಯ ಇರುವ ಬೋರ್​ವೆಲ್​ಗಳು ಬತ್ತಿದ್ದು, ಜನರು ನೀರಿಗಾಗಿ ಹೊಸ ಬೋರ್​ವೆಲ್​ ಕೊರೆಯಲು ಮುಂದಾಗಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ಬಯಲು ಸೀಮೆಗಳಲ್ಲಿ ಮಾತ್ರವಲ್ಲ, ಕರಾವಳಿ ಪ್ರದೇಶದಲ್ಲಿ ಕೂಡ ಅಂತರ್ಜಲ ಮಟ್ಟ ಹಾಗೂ ಅಣೆಕಟ್ಟಿನ ನೀರಿನ ಸಂಗ್ರಹಣೆಯಲ್ಲಿ ಕೊರತೆ ಉಂಟಾಗುತ್ತಿದೆ. ಮಂಗಳೂರಿನಲ್ಲಿಯೂ ನೀರಿನ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಜೂನ್​ 1ರ ವರೆಗೆ ಕರಾವಳಿ ತೀರ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಬಗ್ಗೆ ಈಗಾಗಲೇ ಮಂಗಳೂರು ನಗರಸಭೆ ಮಾಹಿತಿ ನೀಡಿದೆ.

ಈ ಸಮಸ್ಯೆಗೆ ಮುಕ್ತಿ ಎಂದರೆ ಮಳೆ. ಉತ್ತಮ ಮಳೆಯಿಂದಾಗಿ ಅಣೆಕಟ್ಟಿನ ನೀರಿನ ಸಂಗ್ರಹಣೆ ಹೆಚ್ಚುವ ಮೂಲಕ ಈ ಸಮಸ್ಯೆಗೆ ಮುಕ್ತಿ ಕಾಣುವ ಭರವಸೆ ಇದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು.

ಕಳೆದ ಮುಂಗಾರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಅಧಿಕ ಮಳೆ ಪಡೆದಿತ್ತು. ಉತ್ತರ ಕನ್ನಡ ಕಡಿಮೆ ಪ್ರಮಾಣದ ಅಂದರೆ 586.1ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಮೇ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಪ್ರಮಾಣ ಪಡೆದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್​ಎನ್​ಡಿಎಂಸಿ) ಅಂಕಿ ಅಂಶಗಳು ತಿಳಿಸಿವೆ.

ಕರಾವಳಿ ಭಾಗ ಸೇರಿದಂತೆ ನೇತ್ರಾವತಿ, ಪಲ್ಗುಣಿ, ಸ್ವರ್ಣ, ಚಕ್ರ, ವರಾಹಿ, ಶರಾವತಿ, ಅಘಾನಾಶಿನಿ ಮತ್ತು ಕಾಳಿ ನದಿಗಳಲ್ಲಿ ನದಿ ನೀರಿನ ಹರಿವು ನಿಂತಿದೆ. ಉಡುಪಿಯ ನೀರಿನ ಮೂಲವಾಗಿರುವ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಬಜೆ ಅಣಿಕಟ್ಟಿನಲ್ಲಿ ನೀರಿನ ಸಂಗ್ರಹ ಡೆಡ್​ ಸ್ಟೋರೇಜ್​ ಮಟ್ಟಕ್ಕೆ ತಲುಪಿದೆ ಎಂದು ಕೇಂದ್ರ ವರದಿ ಮಾಡಿದೆ.

ರಾಜ್ಯದ 13 ಅಣೆಕಟ್ಟುಗಳ ಒಟ್ಟು ನೀರಿನ ಪ್ರಮಾಣ ಸೇರಿ 155 ಟಿಎಂಸಿ ಇದೆ, ಹೇಮಾವತಿ, ತುಂಗಾಭದ್ರ ಅಣೆಕಟ್ಟ, ಬೆಳಗಾವಿಯ ಘಟಪ್ರಭ ಮತ್ತು ಮಲಪ್ರಭಗಳ ನೀರಿನ ಮಟ್ಟ ಕನಿಷ್ಟಕ್ಕೆ ಇಳಿದಿದೆ, ಪ್ರಸ್ತುತ ತುಂಗಭದ್ರಾ ಅಣೆಕಟ್ಟಿನಲ್ಲಿ ಶೇ 3ರಷ್ಟು ನೀರಿನ ಪ್ರಮಅಣವಿದ್ದರೆ, ಮಲಪ್ರಭಾದಲ್ಲಿ ಶೇ 5ರಷ್ಟು, ಘಟಪ್ರಭಾದಲ್ಲಿ ಶೇ 9ರಷ್ಟು ನೀರಿನ ಸಂಗ್ರಹ ಇದೆ. ಉತ್ತರ ಕನ್ನಡದ ಸೂಪಾದ ಅಣೆಕಟ್ಟಿನಲ್ಲಿ ಮಾತ್ರ ಈ ಬೇಸಿಗೆಯಲ್ಲಿಯೂ ಶೇ 35 ರಷ್ಟು ನೀರು ಸಂಗ್ರಹಣೆ ಇದೆ.

ಈ ವರ್ಷಕ್ಕೆ ಹೋಲಿಸಿದರೆ ಕಳೆದ ವರ್ಷ ಶೇ40 ರಷ್ಟು ಅಣೆಕಟ್ಟುಗಳು ಭರ್ತಿಯಾಗಿದ್ದವು. ಆದರೆ, ಈ ವರ್ಷ ಎಲ್ಲಾ ಅಣೆಕಟ್ಟುಗಳನ್ನು ಒಟ್ಟಾಗಿದರೆ ನೀರಿನ ಪ್ರಮಾಣ ಶೇ.19ರಷ್ಟು ಮಾತ್ರ ಇದೆ. ಮಳೆಗಾಲವೂ ಕಳೆದ ವರ್ಷದ ನಿರೀಕ್ಷೆಗೆ ಹೋಲಿಸಿದರೆ ಕಡಿಮೆಯಾಗಿದ್ದು, ಉತ್ತರ ಕರ್ನಾಟಕದ ಹಲವು ಕಡೆ ಕೆರೆ ನೀರು ಈಗಾಗಲೇ ಬತ್ತಿದೆ, ನೀರಿಗಾಗಿ ಅಲ್ಲಿನ ಜನ 5 ರಿಂದ 6 ಕಿ.ಮೀ ಸಾಗಬೇಕಾದ ದುಸ್ಥಿತಿ ಒದಗಿದೆ.

ಬೋರ್​ವೆಲ್​ ಮೂಲಕ ಜನರಿಗೆ ನೀರೊದಗಿಸಲು ಸರ್ಕಾರ ಹಣ ವ್ಯಯಿಸಲು ಮುಂದಾದರೂ, ಅಂತರ್ಜಲ ಸಿಗುತ್ತದಂತಹ ಪರಿಸ್ಥಿತಿ ಉದ್ಭವಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಣೆಕಟ್ಟಿಲ್ಲಿರುವ ನೀರಿನ ಸಂಗ್ರಹಣೆ ಪಟ್ಟಿ ಇಂತಿದೆ.
ತುಂಗಾಭದ್ರಾ 3%
ಮಲಪ್ರಭಾ 5%
ಘಟಪ್ರಭಾ 9%
ಹೇಮಾವತಿ 10%
ಕೆಆರ್​ಎಸ್​​ 16%
ಹಾರಂಗಿ 14%
ವರಾಹಿ 19%
ಆಲಮಟ್ಟಿ 19%
ಭದ್ರಾ 20%
ಲಿಂಗನಮಕ್ಕಿ 20%
ಕಬಿನಿ 23%
ನಾರಾಯಣಪುರ 28%
ಸೂಪಾ 35%

Comments are closed.