ಕರ್ನಾಟಕ

ಟಾಕೀಸ್ ನಲ್ಲಿ ರಾಷ್ಟ್ರಗೀತೆಗೆ ಅಗೌರವ; ಬೆಂಗಳೂರಿನಲ್ಲಿ ವ್ಯಕ್ತಿಗೆ ಥಳಿತ

Pinterest LinkedIn Tumblr

ಬೆಂಗಳೂರು: ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇಲೆ ಪೊಲೀಸರು ಜಿತಿನ್​ ಚಂದ್​ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆದರೆ, ಚಿತ್ರಮಂದಿರದಲ್ಲಿದ್ದವರು ನನ್ನನ್ನು ಸುಖಾಸುಮ್ಮನೆ ಥಳಿಸಿದ್ದಾರೆ ಎಂದು ಆತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

ಸಂಜಯ್​ನಗರದ ನಿವಾಸಿಯಾಗಿರುವ ಜಿತಿನ್​, “ಐನಾಕ್ಸ್​ ಮೂವಿಸ್​ನಲ್ಲಿ ಕೆಲ ರೌಡಿಗಳು ನನ್ನನ್ನು ಥಳಿಸಿದ್ದಾರೆ,” ಎಂದು ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿ ಮೌನ ಕಾಯ್ದುಕೊಂಡಿದ್ದು, ಪೊಲೀಸರು ದಾಳಿ ಮಾಡಿದವರನ್ನು ಹಾಗೆಯೇ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾನೆ.

ಜಿತಿನ್​ ವಿರುದ್ಧ ರಾಷ್ಟ್ರಗೀತೆಗೆ ಅಗೌರವ ಸಲ್ಲಿಸಿದ ಪ್ರಕರಣ ದಾಖಲಾಗಿದೆ. “ಪೊಲೀಸರು ನನ್ನ ಹೇಳಿಕೆ ತೆಗೆದುಕೊಳ್ಳಲು ಕರೆದಿದ್ದರು. ನಿಮ್ಮ ಹೇಳಿಕೆ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ನನ್ನನ್ನು ಬಂಧಿಸಿದ್ದಾರೆ,” ಎಂದು ಜಿತಿನ್​ ಆರೋಪಿಸಿದ್ದಾನೆ.

ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿತ್ರ ಮಂದಿರದ ಒಳಗಿನ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಪ್ರಸಾರವಾದರೆ ನಿಲ್ಲುವುದು ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿತ್ತು.

Comments are closed.