ಕರ್ನಾಟಕ

ವಿದ್ಯಾರ್ಥಿನಿಯರ ಮೇಲೆ ಆಗುತ್ತಿರುವ ಅತ್ಯಾಚಾರ ಸಮಸ್ಯೆಗಳಿಗೆ ಪಿಂಕ್​​​​ ಬಾಕ್ಸ್​​ ಪರಿಹಾರ!

Pinterest LinkedIn Tumblr


ರಾಯಚೂರು: ವಿದ್ಯಾರ್ಥಿನಿಯರ ಮೇಲೆ ಆಗುತ್ತಿರುವ ಅತ್ಯಾಚಾರ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಆಗಾಗ ಕೇಳುತ್ತಾ ಹಾಗೂ ನೋಡುತ್ತಾ ಇರುತ್ತೇವೆ. ಆದರೆ ಅವರ ಸಮಸ್ಯೆಗಳಿಗೆ ಪರಿಹಾರವೇನು ಎಂದು ಸಾಕಷ್ಟು ಜನರು ಕೇಳುತ್ತಲೇ ಇರುತ್ತಾರೆ. ಈಗ ಅದಕ್ಕೆ ಪೊಲೀಸರು ಉತ್ತರ ನೀಡಿದ್ದಾರೆ.

ಹೌದು, ರಾಯಚೂರಿನ ಜಿಲ್ಲಾ ಪೊಲೀಸರು ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುವ ಹಾಗೂ ರಕ್ಷಣೆ ನೀಡುವ ಸಲುವಾಗಿ ಒಂದು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ. ಕಳೆದ ತಿಂಗಳು ರಾಯಚೂರಿನಲ್ಲಿ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಸ್ಪದ ಸಾವಿನ ಪ್ರಕರಣದ ನಡೆದಿದ್ದು, ಶವದ ಮರಣೋತ್ತರ ಪರೀಕ್ಷೆ ನಡೆಯುವವರೆಗೂ ಇದು ಅತ್ಯಾಚಾರ ಹಾಗೂ ಕೊಲೆಯಾಗಿರಬಹುದು ಎಂದೇ ಅನುಮಾನಿಸಲಾಗುತ್ತಿತ್ತು. ಆದರೆ ಈಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ.

ಆದರೆ ಈ ಪ್ರಕರಣ ಬೆಳಕಿಗೆ ಬಂದಾಗ ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ಪೋಷಕರಲ್ಲಿ ಒಂದು ರೀತಿಯ ಭಯ ಹಾಗೂ ಅಭದ್ರತೆ ಮನೆ ಮಾಡಿತ್ತು. ಈ ಭಯವನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿನಿಯರಲ್ಲಿ ಧೈರ್ಯ ತುಂಬಲು ರಾಯಚೂರಿನ ಜಿಲ್ಲಾ ಪೊಲೀಸರು ಈಗ ಎಲ್ಲ ಕಾಲೇಜುಗಳಲ್ಲಿ ಪಿಂಕ್​ ಬಾಕ್ಸ್​ಗಳನ್ನು ಅಳವಡಿಸಲು ಮುಂದಾಗಿದ್ದಾರೆ.

ಶಾಲಾ ವಿದ್ಯಾರ್ಥಿನಿಯರು ಹಾಗೂ ಮಹಿಳಾ ಉಪನ್ಯಾಸಕರು ತಮ್ಮಗಾಗುವ ತೊಂದರೆ ಹಾಗೂ ಸಮಸ್ಯೆಗಳ ಬಗ್ಗೆ ಚೀಟಿಯಲ್ಲಿ ಬರೆದು ಪಿಂಕ್​ ಬಾಕ್ಸ್​ನಲ್ಲಿ ಹಾಕಬೇಕು. ಆ ದೂರುಗಳನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಎರಡು ದಿನಕ್ಕೊಮ್ಮೆ ಪರಿಶೀಲಿಸುತ್ತಾರಂತೆ. ಅಷ್ಟೇ ಅಲ್ಲದೆ ಎಲ್ಲ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಸಿಸಿಟಿವಿ ಅಳವಡಿಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಪೊಲೀಸರ ಕ್ರಮಕ್ಕೆ ಮೆಚ್ಚುಗೆ

ಜತೆಗೆ ಕಾಲೇಜುಗಳ ನಾಮಫಲಕಗಳ ಮೇಲೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಸಹ ಬರೆಸಲಾಗುತ್ತಿದೆ. ಪೊಲೀಸರ ಈ ಕ್ರಮದಿಂದಾಗಿ ಈಗ ವಿದ್ಯಾರ್ಥಿನಿಯರು ಧೈರ್ಯದಿಂದ ಇರಬಹುದಾಗಿದೆ. ಅಲ್ಲದೆ ದೂರು ನೀಡಿದವರ ಹೆಸರನ್ನೂ ಪೊಲೀಸರು ಬಹಿರಂಗಪಡಿಸುವುದಿಲ್ಲವಂತೆ. ಅದಕ್ಕೆ ಹೆಣ್ಣು ಮಕ್ಕಳು ಧೈರ್ಯವಾಗಿ ದೂರು ಸಲ್ಲಿಸಬಹುದಾಗಿದೆ ಎಂದು ವಿದ್ಯಾರ್ಥಿನಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕಾಲೇಜುಗಳಲ್ಲಿ ಮಾತ್ರ ಪಿಂಕ್​ ಬಾಕ್ಸ್​ ಅಳವಡಿಸಲಾಗಿದ್ದು, ನಗರದ ಇತರ ಕಡೆಯೂ ಪಿಂಕ್ ಬಾಕ್ಸ್​ ಅಳವಡಿಸಬೇಕು. ಜತೆಗೆ ಕಾಲಕಾಲಕ್ಕೆ ದೂರುಗಳನ್ನು ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿನಲ್ಲೂ ಇದೇ ರೀತಿಯಲ್ಲಿ ಪಿಂಕ್​ ಬಾಕ್ಸ್​ ಅಭಿಯಾನವನ್ನು ಪೊಲೀಸರು ಆರಂಭಿಸಿದ್ದರು. ನಗರದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ತಮಗಾಗುವ ಸಮಸ್ಯೆಗಳ ಕುರಿತು ಬರೆದು ಆ ಬಾಕ್ಸ್​ಗಳಲ್ಲಿ ಹಾಕಬೇಕಿತ್ತು. ಆದರೆ ಅದು ಅಂದುಕೊಂಡಂತೆ ಯಶಸ್ವಿಯಾಗಲಿಲ್ಲ.

Comments are closed.