ಕರ್ನಾಟಕ

ಸರ್ಕಾರ ಬೀಳಿಸಲು ಬಿಜೆಪಿಗೆ ಕಪ್ಪುಹಣ ಎಲ್ಲಿಂದ ಬರುತ್ತಿದೆ? ಸಿದ್ದರಾಮಯ್ಯ

Pinterest LinkedIn Tumblr


ಗುಲ್ಬರ್ಗ: ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವುದು ವಿರೋಧ ಪಕ್ಷದ ಕೆಲಸವೆ? ಇಷ್ಟುಕ್ಕೂ ಶಾಸಕರನ್ನು ಖರೀದಿಸಲು ಇವರಿಗೆ ಕೋಟಿ ಕೋಟಿ ಕಪ್ಪು ಹಣ ಕೊಡುತ್ತಿರುವವರು ಯಾರು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಯಡಿಯೂರಪ್ಪ ಕಳೆದ ಒಂದು ವರ್ಷದಿಂದ ಸರ್ಕಾರ ಬೀಳಿಸ್ತೀನಿ..ಸರ್ಕಾರ ಬೀಳಿಸ್ತೀನಿ ಅಂತ ಹೇಳ್ತಾನೆ ಇದಾರೆ. ಇನ್ನೂ ಸಮ್ಮಿಶ್ರ ಸರ್ಕಾರ ರೂಪಗೊಂಡಾಗಿಂದ ನಮ್ಮ ಜೊತೆ 20 ಜನ ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಹೇಳಿಕೆ ನೀಡ್ತಾ ತಿರುಗಾಡ್ತಿದಾರೆ. ಆದರೆ, ಈವರೆಗೆ ಸರ್ಕಾರವನ್ನ ಬೀಳ್ಸೋಕಾಯ್ತ? ಎಂದು ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಪ್ರಶ್ನೆಮಾಡಿದ್ದಾರೆ.

“ವಿಧಾನಸಭೆ ಚುನಾವಣೆ ಮುಗಿದಾಗ ಬಿಜೆಪಿ ದೊಡ್ಡ ಪಕ್ಷ ಅಂತ ಸರ್ಕಾರ ರಚಿಸಿ ಬಹುಮತ ಸಾಭೀತುಪಡಿಸಲು ರಾಜ್ಯಪಾಲರು ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟರು. ಆದರೆ, ಸರ್ಕಾರ ಮೂರೆ ದಿನಕ್ಕೆ ಬಿದ್ದೋಯ್ತು. ಮತ್ಯಾಕೆ ಯಡಿಯೂರಪ್ಪ ದಿನಬೆಳಗಾದ್ರೆ ಇಂತಹ ಹೇಳಿಕೆ ಕೊಡ್ತಾರೆ? ಇನ್ನೂ ಶಾಸಕರನ್ನು ಖರೀದಿ ಮಾಡೋಕೆ ಇವರಿಗೆ ಕೋಟಿ ಕೋಟಿ ಕಪ್ಪು ಹಣ ಎಲ್ಲಿಂದ ಬರುತ್ತೆ? ಇವರಿಗೆ ಹಣ ಪೂರೈಕೆ ಮಾಡ್ತಾ ಇರೋದು ಯಾರು? ಪ್ರಧಾನಿ ನರೇಂದ್ರ ಮೋದಿ ನಾ? ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ನ?” ಎಂದು ಪ್ರಶ್ನೆ ಮಾಡುವ ಮೂಲಕ ಸಿದ್ದರಾಮಯ್ಯ ವಿರೋಧ ಪಕ್ಷವನ್ನು ಕಟುವಾದ ಟೀಕೆಗೆ ಗುರಿಪಡಿಸಿದ್ದಾರೆ.

ಇನ್ನೂ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಬುಡ ಅಲ್ಲಾಡುತ್ತದೆ ಎಂಬ ಯಡಿಯೂರಪ್ಪನವರ ಹೇಳಿಕೆಗೂ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಹಾಗಾದ್ರೆ ಇಷ್ಟು ದಿನ ಕೇಂದ್ರದಲ್ಲಿ ಯಾವ ಸರ್ಕಾರ ಇತ್ತು? ಎಂದು ಮರುಪ್ರಶ್ನೆ ಮಾಡಿದ್ದಾರೆ. ಕಳೆದ ಐದು ವರ್ಷದಿಂದ ಕೇಂದ್ರದಲ್ಲಿ ಎನ್​ಡಿಎ ಸರ್ಕಾರವೇ ಅಧಿಕಾರದಲ್ಲಿದೆ. ಆಗಿದಂಲೂ ರಾಜ್ಯ ಸರ್ಕಾರವನ್ನು ಬೀಳಿಸ್ತೀನಿ ಬೀಳಿಸ್ತೀನಿ ಅಂತ ಯಡಿಯೂರಪ್ಪ ಹೇಳ್ತಾನೆ ಇದಾರೆ. ಇಷ್ಟು ದಿನ ಆಗದ್ದು ಈಗ ಆಗುತ್ತಾ? ಈ ಬಾರಿಯ ಚುನಾವಣೆಯಲ್ಲಿ ಎನ್​ಡಿಎ ಹಾಗೂ ಸೋಲು ಖಚಿತ. ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಾರರು. ಸ್ಥಳೀಯ ಪಕ್ಷಗಳ ಬೆಂಬಲದೊಂದಿಗೆ ಯುಪಿಎ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ” ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ? : ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವಾಗ ಮುಖ್ಯಮಂತ್ರಿ ರೆಸಾರ್ಟ್​ ವಾಸ್ತವ್ಯ ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಮುಖ್ಯಮಂತ್ರಿಗಳು ಮೊನ್ನೆ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬರ ನಿವರ್ಹಣೆಗಾಗಿ ಏನೇನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೆ ಬರ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಹಣ ತೆಗೆದಿಡಲಾಗಿದೆ” ಎಂದು ತಿಳಿಸಿದ್ದಾರೆ.

ಅಲ್ಲದೆ “ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಯಾವುದೇ ಅಭಿವೃದ್ಧಿ ಕೆಲಸ ಮಾಡುವಂತಿಲ್ಲ. ಭಾಗಶಃ ಇದೆ ಕಾರಣಕ್ಕೆ ಸಿಎಂ ವಿಶ್ರಾಂತಿಗೆ ತೆರಳಿರಬೇಕು” ಎಂದು ಜನರ ಆಕ್ರೋಶಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಇನ್ನೂ ಈ ವಿಚಾರದಲ್ಲೂ ಬಿಜೆಪಿ ವಿರುದ್ಧ ಕೆಂಡಕಾರಿದ ಅವರು, “ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದ್ರೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತದೆ. ಇನ್ನು ಅಭಿವೃದ್ಧಿ ಕೆಲಸ ಮಾಡದಿದ್ದರೆ ಸರ್ಕಾರವನ್ನು ಕಟುವಾಗಿ ಟೀಕೆ ಮಾಡುತ್ತದೆ. ಈ ನಡುವೆ ಸರ್ಕಾರವನ್ನು ಅಂತ್ರಗೊಳಿಸುವ ಕೆಲಸವನ್ನೂ ಮಾಡುತ್ತದೆ. ಇಡೀ ರಾಜ್ಯ ಬರದ ಪರಿಸ್ಥಿತಿಯಲ್ಲಿರುವ ಜವಾಬ್ದಾರಿಯುತ ವಿರೋಧ ಪಕ್ಷ ಮಾಡುವ ಕೆಲಸವೇ ಇದು? ಆ ನಿಟ್ಟಿನಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಹಾಗೂ ಯಡಿಯೂರಪ್ಪ ಸೋತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

Comments are closed.