ಬೆಂಗಳೂರು: ರಾಜಗುರು ದ್ವಾರಕಾನಾಥ ಗುರೂಜಿ ಅವರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕನಿಷ್ಠ 3 ಸ್ಥಾನಗಳು ಸಿಗಲಿವೆ. ದೇವೇಗೌಡರ ಕುಟುಂಬದವರು ಸ್ಪರ್ಧಿಸಿರುವ ಎಲ್ಲಾ 3 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ. ಹಾಸನ, ಮಂಡ್ಯ ಮತ್ತು ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ಜಯ ನಿಶ್ಚಿತವಾಗಿದೆ. ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಮತ್ತು ಹೆಚ್.ಡಿ. ದೇವೇಗೌಡ ಅವರು ಲೋಕಸಭೆ ಮೆಟ್ಟಿಲೇರಲಿದ್ದಾರೆ. ಇದು ರಾಜ್ಯದ ಜನಪ್ರಿಯ ರಾಜಗುರುಗಳಾದ ದ್ವಾರಕಾನಾಥ್ ಗುರೂಜಿ ತೆರೆದಿಟ್ಟ ಭವಿಷ್ಯ.
ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಗೆಲುವು ಸುಲಭವಿಲ್ಲ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಸಮಾನ ಪೈಪೋಟಿ ಇದೆ. ಬಿ.ವೈ. ರಾಘವೇಂದ್ರ ಅವರಿಗೇ ಸ್ವಲ್ಪ ಅನುಕೂಲಕರ ವಾತಾವರಣ ಇದೆ ಎಂದು ಗುರೂಜಿ ಹೇಳಿದ್ದಾರೆ. ಮಂಡ್ಯದಲ್ಲಿ ನಡೆದ ತೀವ್ರ ಪೈಪೋಟಿಯ ಬಗ್ಗೆ ಮಾತನಾಡಿದ ಗುರೂಜಿ, ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊದಮೊದಲು ಕಷ್ಟವಿತ್ತು. ಆದರೆ, ಅವರದೇ ಆದ ಕಸರತ್ತು ಮಾಡಿರುವುದರಿಂದ ನಿಖಿಲ್ ಗೆಲುವಿಗೆ ಅನುಕೂಲದ ಸ್ಥಿತಿ ನಿರ್ಮಾಣವಾಗಿದೆ. ಅವರು ಮಾಡಿದ ಒಳ್ಳೆಯ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ದ್ವಾರಕಾನಾಥ್ ಗುರೂಜಿ ಅಭಿಪ್ರಾಯಪಟ್ಟರು.
ಇದೇ ವೇಳೆ, ಮೇ 23ರ ನಂತರ ಸರಕಾರ ಬೀಳುತ್ತದೆ, ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬಿತ್ಯಾದಿ ಸುದ್ದಿಗಳನ್ನ ತಳ್ಳಿಹಾಕಿದ ಗುರೂಜಿ, ಕುಮಾರಸ್ವಾಮಿ ಅವರಿಗೆ ದೇವರ ಅನುಗ್ರಹವಿದೆ. ಈ ಸರಕಾರ ಇನ್ನೂ 4 ವರ್ಷ ಸುಭದ್ರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಹಾಗೆಯೇ, ಮೇ 23ರ ನಂತರ ಯಾರೇ ಸಿಎಂ ಆದರೂ ಎಲ್ಲರೂ ತಮ್ಮವರೇ ಎಂದೂ ಅವರು ಸ್ಪಷ್ಟನೆ ಕೊಟ್ಟರು.
ಇದೇ ವೇಳೆ, ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಧೈರ್ಯಗೆಟ್ಟರೆ ಎಲ್ಲವೂ ಸರ್ವನಾಶ ಆಗುತ್ತದೆ ಎಂದೂ ಗುರೂಜಿ ಎಚ್ಚರಿಸಿದರು. ಹಾಗೆಯೇ ಕುಮಾರಸ್ವಾಮಿ ಟೆಂಪಲ್ ರನ್ ಮಾಡುತ್ತಿದ್ದಾರೆಂಬ ಈಶ್ವರಪ್ಪ ಟೀಕೆಯನ್ನು ಅಲ್ಲಗಳೆದ ದ್ವಾರಕನಾಥ ಗುರೂಜಿ, ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನಲ್ಲಿ ಸಂಕಷ್ಟ ಬಂದಾಗ ದೇವರಲ್ಲಿ ಪ್ರಾರ್ಥನೆ ಮಾಡಿಲ್ಲವೆಂದರೆ ಹೇಗೆ? ಕುಮಾರ ಪರ್ವತದಲ್ಲಿರುವ ಷಣ್ಮುಗ ಸ್ವಾಮಿಯು ಮುಖ್ಯಮಂತ್ರಿಯನ್ನು ಕಾಪಾಡುತ್ತಾನೆ ಎಂದು ಹೇಳಿದರು.
ಕುಕ್ಕೆ ಸುಬ್ಬಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಿಲಾಗುತ್ತಿರುವ ಚಿನ್ನದ ರಥದ ವಿಚಾರದ ಬಗ್ಗೆ ಇರುವ ವಿವಾದ ಮತ್ತು ಅನುಮಾನಗಳನ್ನು ದ್ವಾರಕಾನಾಥ ಗುರೂಜಿ ಬಗೆಹರಿಸುವ ಪ್ರಯತ್ನ ಮಾಡಿದರು.
72 ಕೋಟಿ ವೆಚ್ಚವಾಗಲಿರುವ ಚಿನ್ನದ ರಥವನ್ನು ಜನರ ತೆರಿಗೆ ಹಣದಿಂದ ಮಾಡಿಸಬಾರದು. ಕುಕ್ಕೆಯಲ್ಲಿ ಹುಂಡಿ ಹಣವಿದ್ದು, ಅದನ್ನೇ ಬಳಸಿಕೊಳ್ಳಬೇಕು ಎಂದು ತಾನು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿರುವುದಾಗಿ ಗುರೂಜಿ ತಿಳಿಸಿದರು. ಹಾಗೆಯೇ, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ನಿಖಿಲ್ ಗೆಲುವಿಗಾಗಲೀ, ದೇವೇಗೌಡರ ಗೆಲುವಿಗಾಗಿಲೀ ಈ ಚಿನ್ನದ ರಥ ಮಾಡಿಸುತ್ತಿಲ್ಲ ಎಂದೂ ಗುರೂಜಿ ಸ್ಪಷ್ಟಪಡಿಸಿದರು.
ಇವತ್ತು ಕುಮಾರಸ್ವಾಮಿ ಅವರು ದ್ವಾರಕಾನಾಥ್ ಗುರೂಜಿ ಅವರನ್ನು ಭೇಟಿಯಾಗಿ ಸಾಕಷ್ಟು ಹೊತ್ತು ಸಮಾಲೋಚನೆ ನಡೆಸಿದ್ದರು.
ದ್ವಾರಕನಾಥ್ ಗುರೂಜಿ ಅವರು ರಾಜ್ಯದ ಅತ್ಯಂತ ಬೇಡಿಕೆಯ ಜ್ಯೋತಿಷಿಗಳಲ್ಲೊಬ್ಬರೆನಿಸಿದ್ದಾರೆ. ಬಹುತೇಕ ರಾಜಕಾರಣಿಗಳು ಇವರ ಸಲಹೆ ಪಡೆದುಕೊಳ್ಳುತ್ತಾರೆ. ಡಿಕೆ ಶಿವಕುಮಾರ್, ದೇವೇಗೌಡ ಕುಟುಂಬ, ಈಶ್ವರಪ್ಪ, ಯಡಿಯೂರಪ್ಪ ಮೊದಲಾದವರು ರಾಜಗುರುಗಳೊಂದಿಗೆ ಆಗಾಗ್ಗೆ ಸಮಾಲೋಚನೆ ನಡೆಸುತ್ತಾರೆ.
Comments are closed.