ಕರ್ನಾಟಕ

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಂಪುಟ ಪುನರ್​ ರಚನೆ

Pinterest LinkedIn Tumblr


ಮಂಡ್ಯ: ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟ ಪುನರ್​ ರಚನೆಯಾಗಲಿದ್ದು ಮೇಲುಕೋಟೆ ಶಾಸಕ ಹಾಗೂ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜೆಡಿಎಸ್​ ಹಾಗೂ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಾರಿಯ ಮಂಡ್ಯ ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದರು. ತಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರ ಗೆಲುವಿಗಾಗಿ ಇನ್ನಿಲ್ಲದಂತೆ ಶ್ರಮಿಸಿದ್ದರು. ಆದರೂ ಸಹ ಮಂಡ್ಯದಲ್ಲಿ ನಿಖಿಲ್ ಗೆಲುವು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದ ಇಬ್ಬರು ಸಚಿವರ ಪೈಕಿ ಒಬ್ಬರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪುಟ್ಟರಾಜು ತಮ್ಮಣ್ಣ ಮೇಲೆ ತೂಗುಗತ್ತಿ : ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ತಮ್ಮ ಅಧಿಕಾರಿಗಳಿಗೆ ಮಂಡ್ಯದ ಫಲಿತಾಂಶದ ಬಗ್ಗೆ ಚುನಾವಣಾ ನಂತರ ಸಮೀಕ್ಷೆಗೆ ಆದೇಶ ನೀಡಿದ್ದರು. ಈ ಸಮೀಕ್ಷೆಯ ಪ್ರಕಾರ ಮಂಡ್ಯದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಯಾವ ಕ್ಷೇತ್ರದಿಂದ ನಿಖಿಲ್ ಎಷ್ಟು ಮತಗಳ ಲೀಡ್​ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಸಮೀಕ್ಷೆಯ ಪ್ರಕಾರ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಪ್ರತಿನಿಧಿಸುವ ಮದ್ದೂರು ಹಾಗೂ ಸಣ್ಣ ನೀರಾವರಿ ಸಚಿವ ಪುಟ್ಟರಾಜು ಪ್ರತಿನಿಧಿಸುವ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್​ ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಫಲಿತಾಂಶದ ನಂತರ ಈ ಎರಡು ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ನಿಖಿಲ್​ಗೆ ಕಡಿಮೆ ಅಂತರದ ಲೀಡ್ ಸಿಗುತ್ತದೆಯೋ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಇನ್ನೂ ಅಕಸ್ಮಾತ್ ಮಂಡ್ಯದಲ್ಲಿ ನಿಖಿಲ್ ಸೋತರೆ ಮಂಡ್ಯ ಚುನಾವಣೆ ಉಸ್ತುವಾರಿ ವಹಿಸಿದ್ದ ಪುಟ್ಟರಾಜು ಸೋಲಿನ ಹೊಣೆಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದಲ್ಲದೆ, ಸಚಿವ ಪುಟ್ಟರಾಜು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಮಾಜಿ ಪ್ರಧಾನಿ ದೇವೇಗೌಡರ ಬಳಿ ಅವರ ಸಂಬಂಧ ಅಷ್ಟಾಗಿ ಸರಿ ಇಲ್ಲ. ಅಲ್ಲದೆ ಮತ್ತೊಬ್ಬ ಸಚಿವ ಡಿ.ಸಿ. ತಮ್ಮಣ್ಣ ದೇವೇಗೌಡರ ಬೀಗರಾಗಿರುವ ಕಾರಣ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಕಡಿಮೆ. ಹೀಗಾಗಿ ಸಂಪುಟ ಪುನರ್​ ರಚನೆ ನಂತರ ಸಚಿವ ಪುಟ್ಟರಾಜು ತಮ್ಮ ಸಚಿವ ಸ್ಥಾನವನ್ನು ತೊರೆಯುವುದು ಬಹುತೇಕ ಖಚಿತವಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಲೋಕಸಭೆ ಫಲಿತಾಂಶ ನಿರ್ಧರಿಸಲಿದೆ.

Comments are closed.