ಬೆಂಗಳೂರು: ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಎಚ್.ಡಿ.ರೇವಣ್ಣಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಅಕ್ರಮವಾಗಿ ಮತದಾನ ಮಾಡಿಸಿದ ಆರೋಪದ ಮೇಲೆ ವಕೀಲ ದೇವರಾಜಗೌಡ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಹಾಸನ ಲೋಕಸಭೆ ಕ್ಷೇತ್ರಕ್ಕೆ ನಡೆದ ಮತದಾನದ ವೇಳೆ ಹೊಳೆನರಸೀಪುರದ ಮತಗಟ್ಟೆ ಸಂಖ್ಯೆ 244 ಪಡವಲಹಿಪ್ಪೆ ಗ್ರಾಮದಲ್ಲಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಪರವಾಗಿ ಕಳ್ಳ ಮತಗಳನ್ನು ಹಾಕಿಸಿದ್ದಾರೆ ಎಂದು ದೇವರಾಜಗೌಡ ದೂರು ನೀಡಿದ್ದಾರೆ.
“ಮತಗಟ್ಟೆಯ ಒಳಗೆ ರೇವಣ್ಣ 26 ನಿಮಿಷ ಅಕ್ರಮವಾಗಿ ಇದ್ದು, ಬೇರೆ ಕ್ಷೇತ್ರದ ಮತದಾರರ ಕರೆತಂದು ಮತ ಹಾಕಿಸದ್ದಾರೆ. ಏಪ್ರಿಲ್ 18 ರಂದು ಬೆಳಗ್ಗೆ 10:43 ರಿಂದ 18 ನಿಮಿಷ ಹಾಗೂ ಮತ್ತೆ 8 ನಿಮಿಷ ಒಳಗೆ ಅಕ್ರಮವಾಗಿ ಇದ್ದರು. ಈ ಬಗ್ಗೆ ಅಂದೇ ಬೂತ್ ಏಜೆಂಟ್ ದೂರು ನೀಡಿದ್ದರು. ಪರಿಶೀಲನೆಯ ವೇಳೆ ಕಳ್ಳ ಮತದಾನ ನಡೆದಿದ್ದು ಸಾಬೀತಾಗಿತ್ತು. ಆದರೆ ರೇವಣ್ಣ ಹೊರತುಪಡಿಸಿ ಚುನಾವಣೆಗೆ ನೇಮಿಸಿದ್ದ ಅಧಿಕಾರಿಗಳಾದ ಯೊಗೇಶ್ ವಿ, ರಾಮಚಂದ್ರ ರಾವ್, ಡಿ.ಎಸ್. ದಿನೇಶ್ ಅವರನ್ನು ಅಮಾನತು ಮಾಡಲಾಗಿತ್ತು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರೇವಣ್ಣ ಕಳ್ಳ ಮತದಾನ ಮಾಡಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮತ ಚಲಾವಣೆ ಮಾಡುವಂತೆ ಮಾಡಿದ್ದಾರೆ. ಇವರ ವಿರುದ್ದವೂ ಕ್ರಮ ತೆಗೆದುಕೊಳ್ಳುವಂತೆ,” ದೂರು ನೀಡಲಾಗಿದೆ.
ಈ ಹಿಂದೆ ಸುಪ್ರೀಂಕೋರ್ಟ್ ಇಂತಹ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ರಿಟ್ ಅರ್ಜಿ 538/2011 ಪ್ರಕರಣದಲ್ಲಿ ಅಕ್ರಮ ಎಸಗಿದ ಜನಪ್ರತಿನಿಧಿಗಳನ್ನು ಅಧಿಕಾರದಿಂದ ಪದಚ್ಯುತಿ ಮಾಡಿದೆ. ಕದ್ದು ಮತದಾನ ಮಾಡಿಸಿದವರ ಸ್ಥಾನದ ಜೊತೆಗೆ 6 ವರ್ಷ ಚುನಾವಣೆಗೆ ನಿಲ್ಲದಂತೆ ಆದೇಶ ನೀಡಿದೆ. ಅದೇ ರೀತಿ ರೇವಣ್ಣ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ದೂರು ಪಡೆದ ಚುನಾವಣಾ ಆಯೋಗ ರಾಜ್ಯಪಾಲರಿಗೆ ಪತ್ರ ಬರೆದಿದೆ.
ಒಂದು ವೇಳೆ ರೇವಣ್ಣ ಅವರ ಮೇಲೆ ಮಾಡಿರುವ ಆರೋಪ ಸಾಬೀತಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ. ಅಲ್ಲದೇ, ಮುಂದಿನ ಆರು ವರ್ಷಗಳ ಕಾಲ ಅವರು ಯಾವುದೇ ಚುನಾವಣೆಗೂ ಸ್ಪರ್ಧಿಸುವಂತಿಲ್ಲ.
ಈ ವಿಚಾರವಾಗಿ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ರೇವಣ್ಣ, ದೂರುದಾರನ ಹಿನ್ನೆಲೆ ತಿಳಿದು ಮಾತನಾಡಬೇಕು. ಆರು ದಿನ ಕಳೆದ ಮೇಲೆ ಯಾಕೆ ದೂರು ಕೊಟ್ರು. ಆಯೋಗದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕಳ್ಳ ಓಟು ಹಾಕಿಸಿದ್ರೆ ಚುನಾವಣಾ ಆಯೋಗ ನನ್ನ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.