ಕರ್ನಾಟಕ

ನೀಟ್ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ; ಪ್ರಕಾಶ್ ಜಾವ್ಡೇಕರ್

Pinterest LinkedIn Tumblr


ಬೆಂಗಳೂರು: ರೈಲು ವಿಳಂಬದಿಂದ ನೀಟ್ ಪರೀಕ್ಷೆ ವಂಚಿತರಾಗಿದ್ದ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತೊಂದು ಅವಕಾಶ ನೀಡಿದೆ. ಕೇಂದ್ರ ಸಚಿವ ಪ್ರಕಾಶ್​​​ ಜಾವ್ಡೇಕರ್​​​ ಅವರೇ ಖುದ್ದು ಟ್ವೀಟ್​​ ಮೂಲಕ “ಹಂಪಿ ಎಕ್ಸ್‍ಪ್ರೆಸ್ ರೈಲು ವಿಳಂಬದಿಂದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೀಟ್​​ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಸಿಎಂ ಎಚ್​​.ಡಿ ಕುಮಾರಸ್ವಾಮಿ ಅವರು, ಕೇಂದ್ರ ಸಚಿವ ಪ್ರಕಾಶ್​​ ಜಾವ್ಡೇಕರ್​​ ಅವರಿಗೆ ಮನವಿ ಮಾಡಿದ್ದರು. ರೈಲು ವಿಳಂಬದಿಂದಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೆ ಮರು ಪರೀಕ್ಷೆ ನಡೆಸಿ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಟ್ವೀಟ್​​ನಲ್ಲಿ ಕೇಳಿಕೊಂಡಿದ್ದರು.

ಹಂಪಿ ಎಕ್ಸ್‍ಪ್ರೆಸ್ ರೈಲು ವಿಳಂಬ ಕಾರಣಕ್ಕೆ ನಿನ್ನೆ ನೀಟ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಹಲವು ಗೊಂದಲಗಳನ್ನು ಎದುರಿಸಬೇಕಾಯಿತು. ಒಂದು ಕಡೆ ಪರೀಕ್ಷೆ ಬರೆಯಲು ಬರುತ್ತಿದ್ದ ನೂರಾರು ವಿದ್ಯಾರ್ಥಿಗಳಿದ್ದ ರೈಲು ತಡವಾದರೆ, ಮತ್ತೊಂದು ಕಡೆ ಪರೀಕ್ಷಾ ಕೇಂದ್ರವನ್ನೇ ಬದಲಾಯಿಸಿದ್ದರಿಂದ ಹಲವು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು.

ಪರೀಕ್ಷೆ ಬರೆಯಲು ರೈಲು ಹತ್ತಿ ಹೊರಟಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊನ್ನೆ ರಾತ್ರಿಯೇ ಹಂಪಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಆದರೆ ರೈಲು ನಿಗದಿತ ಮಾರ್ಗದ ಬದಲು ಬೇರೊಂದು ಮಾರ್ಗದಲ್ಲಿ ಸಂಚರಿಸಿದ್ದರಿಂದ, ಬೆಳಗ್ಗೇ ಬರಬೇಕಿದ್ದ ರೈಲು ಮಧ್ಯಾಹ್ನ 3 ಗಂಟೆಗೆ ಆಗಮಿಸಿತು. ಅಷ್ಟೊತ್ತಿಗಾಗಲೇ ಪರೀಕ್ಷೆ ಮಧ್ಯಾಹ್ನ 2ಗಂಟೆಗೆ ಆರಂಭವಾಗಿತ್ತು.

ಬಳ್ಳಾರಿ, ಕೊಪ್ಪಳ, ಗದಗ ಸೇರಿ ಹಲವು ಜಿಲ್ಲೆಯ ವಿದ್ಯಾರ್ಥಿಗಳು ಹೊಸಪೇಟೆ-ಗುಂಟಕಲ್​ ಮಾರ್ಗದ ಹಂಪಿ ಎಕ್ಸ್​​​ಪ್ರೆಸ್ ರೈಲು ಹತ್ತಿದ್ದರು. ಆದರೆ ಆ ರೈಲು ಕಡೂರಿನ ಬಳ್ಳೆಕೆರೆಯಲ್ಲಿ ಮಾರ್ಗ ಬದಲಾಯಿಸಿತ್ತು. ರೈಲು ಹಳಿ ಸಮಸ್ಯೆಯಿಂದಾಗಿ ಅರಸೀಕೆರೆ ಮಾರ್ಗವಾಗಿ ರೈಲು ಹೊರಟಿತ್ತು. ರೈಲು ಮಾರ್ಗ ಬದಲಾಯಿಸಿದ್ದಕ್ಕೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.

ರೈಲ್ವೆ ಅಧಿಕಾರಿಗಳನ್ನು ವಿಚಾರಿಸಿದಾಗ ರೈಲು ಹಳಿ ಸಮಸ್ಯೆ ಇರುವುದಾಗಿ ತಿಳಿಸಿದರು. ನಂತರ ವಿದ್ಯಾರ್ಥಿಗಳು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.

ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದರು. ರೈಲು ವಿಳಂಬದಿಂದಾಗಿ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಕೇಂದ್ರ ಸಚಿವರಾದವರಿಗೆ ಈ ಬಗ್ಗೆ ಜವಾಬ್ದಾರಿ ಇರಬೇಕು. ಕೆಲ ದಿನಗಳವರೆಗೆ ಸಚಿವ ಪಿಯೂಷ್​ ಗೋಯಲ್​ ಅವರಿಗೆ ಸರಿಯಾಗಿ ಕೆಲಸ ಮಾಡುವಂತೆ ತಿಳಿಸಿ ಎಂದು ಪ್ರಧಾನಿ ಮೋದಿಯವರಿಗೆ ತರಾಟೆ ತೆಗೆದುಕೊಂಡಿದ್ದರು. ಅಲ್ಲದೇ, ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮ ಪರೀಕ್ಷೆಗೆ ಅವಕಾಶ ಕೊಡುವಂತೆ ಆಗ್ರಹಿಸಿದ್ದರು.

Comments are closed.