ಕರ್ನಾಟಕ

ರಮೇಶ್‌ ಜಾರಕಿಹೊಳಿಗೆ “ಕೈ’ ಕೊಟ್ಟ ಬಳ್ಳಾರಿ ಶಾಸಕರು

Pinterest LinkedIn Tumblr


ಬಳ್ಳಾರಿ: ಸಮುದಾಯದ ಶಾಸಕರನ್ನು ನೆಚ್ಚಿಕೊಂಡು “ಆಪರೇಷನ್‌ ಕಮಲ’ಕ್ಕೆ ಮುಂದಾಗಿದ್ದ ಮಾಜಿ ಸಚಿವ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿ ಈಗ ಒಂಟಿಯಾಗಿದ್ದಾರೆ. ಮುಂಬೈನಲ್ಲಿ ತಮ್ಮ ಜತೆ ಕಾಣಿಸಿಕೊಂಡಿದ್ದ ಶಾಸಕರೆಲ್ಲರೂ ಚುನಾವಣೆ ಬಳಿಕ ಅಂತರ ಕಾಯ್ದುಕೊಳ್ಳುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸಚಿವ ಡಿ.ಕೆ.ಶಿವಕುಮಾರ್‌ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ರಮೇಶ್‌ ಜಾರಕಿಹೊಳಿ, ಸ್ವ ಸಮುದಾಯದ ಶಾಸಕರನ್ನು ನೆಚ್ಚಿಕೊಂಡು “ಆಪರೇಷನ್‌ ಕಮಲ’ಕ್ಕೆ ಮುಂದಾಗಿದ್ದರು. ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಹ ಜಾರಕಿಹೊಳಿಗೆ ಸಾಥ್‌ ನೀಡಿದ್ದರು.

ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌, ರಾಯಚೂರು ಗ್ರಾಮೀಣ ಶಾಸಕ ಬಸವರಾಜ್‌ ದದ್ದಲ್‌ ಜಾರಕಿಹೊಳಿ ಹಿಂದೆ ಬರುವುದಾಗಿ ತಿಳಿಸಿದ್ದರು. ಆದರೆ, ಆಪರೇಷನ್‌ ಕಮಲದ ಆಡಿಯೋ ಬಹಿರಂಗವಾಗಿದ್ದು ಹಾಗೂ ನಿರೀಕ್ಷಿತ ಶಾಸಕರು ಮುಂಬೈಗೆ ತೆರಳದ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿತ್ತು.

ಆದರೆ, ಲೋಕಸಭೆ ಚುನಾವಣೆಯಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದ ರಮೇಶ್‌ ಜಾರಕಿಹೊಳಿಗೆ ಸ್ವ ಸಮುದಾಯದ ಶಾಸಕರೇ ಶಾಕ್‌ ನೀಡಿದ್ದಾರೆ. ರಾಜೀನಾಮೆ ನೀಡುವುದಾಗಿ ಬೆಂಗಳೂರಿಗೆ ತೆರಳಿದ್ದ ಜಾರಕಿಹೊಳಿ ಅವರನ್ನು ಗಣಿ ಜಿಲ್ಲೆಯ ಶಾಸಕರೂ ಸೇರಿ ಯಾವೊಬ್ಬ ಶಾಸಕರೂ ಭೇಟಿಯಾಗದೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ತಮ್ಮ ಸಹೋದರಗೆ ದೊರೆಯಬೇಕಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಜಾರಕಿಹೊಳಿ ಬೀಗರ ಪಾಲಾಗಿದ್ದರಿಂದ ಬೇಸರಗೊಂಡಿರುವ ನಾಗೇಂದ್ರ ಕೂಡ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ 10 ದಿನಗಳಿಂದ ಬೆಂಗಳೂರಿನಲ್ಲೇ ಇದ್ದರೂ, ರಮೇಶ್‌ ಅವರನ್ನು ಒಮ್ಮೆಯೂ ಭೇಟಿಯಾಗಿಲ್ಲ ಎನ್ನಲಾಗಿದೆ. ಪರಿಣಾಮ ಇತ್ತೀಚೆಗಷ್ಟೇ ರಾಜೀನಾಮೆ ನೀಡಲೆಂದು ಬೆಂಗಳೂರಿಗೆ ತೆರಳಿದ್ದ ರಮೇಶ್‌ ಜಾರಕಿಹೊಳಿ, ಯಾರೊಬ್ಬರೂ ಭೇಟಿಯಾಗದ ಹಿನ್ನೆಲೆಯಲ್ಲಿ ನಿರ್ಧಾರ ಬದಲಿಸಿ ವಾಪಸ್‌ ಬಂದಿದ್ದಾರೆ ಎನ್ನಲಾಗುತ್ತಿದೆ.

ರೆಸಾರ್ಟ್‌ನಲ್ಲಿ ನಡೆದ ಶಾಸಕರ ಗಲಾಟೆಗೂ ಮುನ್ನ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಹೆಸರೂ ಜಾರಕಿಹೊಳಿ ಪಾಳಯದಲ್ಲಿ ಕೇಳಿ ಬಂದಿತ್ತು. ಶಾಸಕರ ನಡುವಿನ ಗಲಾಟೆಯಿಂದಾಗಿ ಜೈಲು ಸೇರಿದ್ದ ಗಣೇಶ್‌, ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದಾರೆ. ಬಳಿಕ, ಮಾಜಿ ಶಾಸಕ ಬಳ್ಳಾರಿಯ ಸೂರ್ಯ ನಾರಾಯಣರೆಡ್ಡಿ ಅವರನ್ನು ಭೇಟಿಯಾದ ಗಣೇಶ್‌, “ಜೈಲಲ್ಲಿದ್ದ ನನಗೆ ಬೇಲ್‌ ಕೊಡಿಸಿದ್ದು, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದು ನಾರಾಯಣರೆಡ್ಡಿಯವರೇ.

ಇನ್ನು ಮುಂದೆ ಅವರ ಮಾತು ಮೀರಲ್ಲ’ ಎನ್ನುತ್ತಿದ್ದಾರೆ. ಇದರಿಂದ ಶಾಸಕ ಗಣೇಶ್‌ ಸಹ ಜಾರಕಿಹೊಳಿಯವರಿಗೆ “ಕೈ’ಕೊಟ್ಟಂತಾಗಿದ್ದು, ಈ ಎಲ್ಲ ಶಾಸಕರನ್ನು ನಂಬಿ ರಾಜೀನಾಮೆ ನೀಡುವುದಾಗಿ ರಾಜಧಾನಿಗೆ ತೆರಳಿದ್ದ ರಮೇಶ್‌ ಜಾರಕಿಹೊಳಿ, ಈಗ ಒಬ್ಬಂಟಯಾಗಿ ಬೆಳಗಾವಿಗೆ ವಾಪಸ್‌ ಬಂದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇನ್ನು ಜಾರಕಿಹೊಳಿಯವರಿಗೆ ಮುಂಬೈಗೆ ಬರುವುದಾಗಿ ತಿಳಿಸಿದ್ದ ಮಸ್ಕಿ ಶಾಸಕ ಬಸವನಗೌಡ ಪಾಟೀಲ್‌, ಕೊಲ್ಲಾಪುರದವರೆಗೆ ಹೋಗಿ ವಾಪಸ್‌ ಬಂದಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸವರಾಜ್‌ ದದ್ದಲ್‌ ಕೊನೆಯವರೆಗೂ ಹೋಗದೆ ಕೈಕೊಟ್ಟಿದ್ದಾರೆ. ಹಾಗಾಗಿ, ಆಪರೇಷನ್‌ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ರಮೇಶ್‌ ಜಾರಕಿಹೊಳಿಗೆ ಸ್ವಸಮುದಾಯದ ಶಾಸಕರೇ “ಕೈ’ಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

Comments are closed.