ಬೆಂಗಳೂರು: 2019-20ನೇ ಶೈಕ್ಷಣಿಕ ಸಾಲಿನ ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ರಾಜ್ಯದಲ್ಲಿ ಶೇಕಡಾ 73.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 1.8 ರಷ್ಟು ಏರಿಕೆ ಕಂಡು ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
ಈ ವರ್ಷ ಒಟ್ಟು 8 ಲಕ್ಷದ 25 ಸಾವಿರದ 468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಶೇಕಡಾ 79.59ರಷ್ಟು ಬಾಲಕಿಯರು ಮತ್ತು ಶೇಕಡಾ 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಇದುವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದುಕೊಳ್ಳುತ್ತಿದ್ದು ಈ ಬಾರಿ ಜಿಲ್ಲಾವಾರು ಫಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ, ರಾಮನಗರ ಎರಡನೇ ಸ್ಥಾನ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನ ಮತ್ತು ಉತ್ತರ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಆನೇಕಲ್ ನ ಸೃಜನಾ, ಕುಮಟಾದ ನಾಗಾಂಜಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ.
ಒಟ್ಟಾರೆ ಎಂಟು ಲಕ್ಷದ ಇಪ್ಪತ್ತೈದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇ 73 ರಷ್ಟು ಫಲಿತಾಂಶ ಪ್ರಕಟವಾಗಿದೆ. ಇಬ್ಬರು ಬಾಲಕಿಯರು 625ಕ್ಕೆ 625 ಅಂಕ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ಪ್ರಕಟಿಸಿದರು.
ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಅವರು ಹೇಳಿದರು.