ಕರ್ನಾಟಕ

ನೀರಿಲ್ಲದ ನಗರವಾಗುವ ಬೆಂಗಳೂರು: ನೀರಿನ ಒಡಲು ಬರಿದಾಗಲು ಕಾರಣಗಳು?

Pinterest LinkedIn Tumblr


ಬೆಂಗಳೂರು: ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾದ ಕೇಪ್‌ಟೌನ್‌ನಲ್ಲಿ ಕಳೆದ ವರ್ಷ ಏಕಾಏಕಿ ನಲ್ಲಿಗಳಲ್ಲಿ ನೀರು ಸಂಪೂರ್ಣ ಬಂದ್‌ ಆಗಿತ್ತು. ಬಡವ-ಶ್ರೀಮಂತನೆಂಬ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬ ಸಾರ್ವಜನಿಕನಿಗೂ ದಿನಕ್ಕೆ 50 ಲೀಟರ್‌ ನೀರು ಮಾತ್ರ ಬಳಸಬೇಕು. ಸರ್ಕಾರ ಸೂಚಿಸಿದ ಸ್ಥಳಗಳಲ್ಲಿ ಸಾಲಾಗಿ ನಿಂತು ಪಡಿತರ ಮಾದರಿಯಲ್ಲಿ ನೀರು ಪಡೆಯಬೇಕು ಎಂಬ ಆಘಾತಕಾರಿ ಆದೇಶ ನಗರದ ಮೇಯರ್‌ರಿಂದ ಹೊರ ಬಿದ್ದಿತ್ತು.

ಇದೇ ಸ್ಥಿತಿ ಸದ್ಯದಲ್ಲೇ ಉದ್ಯಾನನಗರಿ ಬೆಂಗಳೂರಿಗೂ ಬರಲಿದೆಯಂತೆ.

ಹೌದು, ಬೆಂಗಳೂರು ನೆಚ್ಚಿಕೊಂಡಿರುವ ಜಲಮೂಲಗಳು ಬರಿದಾಗಿ ಸದ್ಯದಲ್ಲೇ ‘ಡೇ ಜೀರೋ’ (ಶೂನ್ಯ ದಿನ- ನೀರಿಲ್ಲದ ದಿನ) ಕಡೆಗೆ ನಗರ ಹೆಜ್ಜೆ ಹಾಕುತ್ತಿದೆ. ಇಂತಹ ಆಘಾತಕಾರಿ ಅಧ್ಯಯನ ವರದಿ ಹೊರ ಬಿದ್ದಿದ್ದು, ವಿಶ್ವದಲ್ಲಿ ಅತಿ ವೇಗವಾಗಿ ನೀರು ಬರಿದಾಗುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ನಗರ ಜಾಗ ಪಡೆದುಕೊಂಡಿದೆ. ಆತಂಕದ ವಿಚಾರವೆಂದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಗರ ಬೆಂಗಳೂರು!

‘ಡೇ ಜೀರೋ’ ಕಡೆ ಹೆಜ್ಜೆ ಇಡುತ್ತಿರುವ ವಿಶ್ವದ ಹನ್ನೊಂದು ನಗರಗಳಲ್ಲಿ ಬೆಂಗಳೂರು ಸಹ ಒಂದು. ಬೆಂಗಳೂರು ಸೇರಿದಂತೆ ಜಗತ್ತಿನ 11 ನಗರಗಳು ಸದ್ಯವೇ ಕೇಪ್‌ ಟೌನ್‌ಗಳಾಗುತ್ತವೆ ಎಂದು ಹಲವು ಸಮೀಕ್ಷೆಗಳು, ಅಧ್ಯಯನಗಳು ಹೇಳಿವೆ. ಡೌನ್‌ ಟು ಅಥ್‌ರ್‍ ಮ್ಯಾಗಜಿನ್‌ ಸಹ ಈ ಕುರಿತು ಸವಿವರ ಸಂಚಿಕೆಯನ್ನು ಮಾಡಿದೆ. ಆತಂಕದ ಬಿಂದು ಎಲ್ಲಿದೆ ಎಂದರೆ ಈ ಸಮೀಕ್ಷೆಗಳು ಪಟ್ಟಿಮಾಡಿರುವ ನಗರಗಳಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನವಿದೆ. ಬ್ರೆಜಿಲ್‌ನ ರಾಜಧಾನಿ ಸೌಪೋಲೊ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ. ವಿಚಿತ್ರವೆಂದರೆ, ಹೀಗೆ ಒಣಗಿ ಹೋಗುವ ನಗರಗಳ ಪಟ್ಟಿಯಲ್ಲಿರುವ ಎಲ್ಲವೂ ಮಹಾನಗರಗಳು. ಅದರಲ್ಲೂ ವಿಶೇಷವೆಂದರೆ ಮಿಯಾಮಿ ಹೊರತುಪಡಿಸಿದಂತೆ ಎಲ್ಲವೂ ರಾಜಧಾನಿಗಳು.

ಕೆರೆಗಳ ನಗರ, ಉದ್ಯಾನನಗರವಾಗಿರುವ ಬೆಂಗಳೂರಿಗೆ ಅಂತರ್ಜಲದ ಜತೆಗೆ ಕಾವೇರಿ ನೀರಿನ ಪೂರೈಕೆ ಇದೆ. ಹೀಗಿದ್ದರೂ 2030ರ ವೇಳೆಗೆ ನೀರಿಗೆ ತೀವ್ರ ಅಭಾವ ಎದುರಿಸಲಿದೆ ಎಂದು ಅಧ್ಯಯನಗಳು ಹೇಳಿವೆ. ಹೀಗೇಕೆ ಎಂಬ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದು, ಜಲಮೂಲಗಳ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಸಾರ್ವಜನಿಕರಿಂದ ಅಂತರ್ಜಲದ ಅತಿಯಾದ ದುರ್ಬಳಕೆ, ನೀರಿನ ಮೂಲಗಳಾದ ಕೆರೆಗಳು ಹಾಗೂ ಜಲಾಶಯಗಳು ಕಲುಷಿತಗೊಂಡಿರುವುದು. 1.20 ಕೋಟಿ ಜನಸಂಖ್ಯೆ ಇರುವ ನಗರವು ಕಾವೇರಿ ನದಿಯೊಂದನ್ನೇ ನೆಚ್ಚಿಕೊಂಡಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಕಳೆದ 4 ದಶಕಗಳಿಂದ ಬೆಂಗಳೂರಿನ ಕೆರೆಗಳು ಶೇ.79ರಷ್ಟುನಾಶವಾಗಿವೆ. ಎರಡು ದಶಕಗಳಲ್ಲೇ ಅಂತರ್ಜಲ ಮಟ್ಟ60 ಮೀಟರ್‌ನಷ್ಟುಕುಸಿದಿದೆ. ಬೆಂಗಳೂರಿಗೆ ನಿತ್ಯ ಪೂರೈಕೆಯಾಗುತ್ತಿರುವ 1350 ದಶಲಕ್ಷ ಲೀಟರ್‌ ನೀರಿನಲ್ಲೂ ಶೇ.40ರಷ್ಟುನೀರು ಸೋರಿಕೆಯಾಗುತ್ತಿದೆ. ಶತಮಾನದಿಂದ ಬೆಂಗಳೂರಿಗರಿಗೆ ಕುಡಿಯುವ ನೀರುಣಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಏಳು ವರ್ಷದ ಹಿಂದೆಯೇ ಕಲುಷಿತಗೊಂಡು ನೀರು ಪೂರೈಸುವುದನ್ನು ನಿಲ್ಲಿಸಿದೆ. ಹೀಗಾಗಿ ಕಾವೇರಿ ನೀರನ್ನೇ ನೆಚ್ಚಿಕೊಂಡಿದ್ದು, ಅದರ ಅಚ್ಚು ಕಟ್ಟು ಪ್ರದೇಶದಲ್ಲಿ ಮಳೆ ಅಭಾವ ಎದುರಾದರೆ ಬೆಂಗಳೂರಿಗರು ಗಂಟಲು ಸಂಪೂರ್ಣ ಒಣಗಲಿದೆ ಎಂದು ಎಚ್ಚರಿಸಿದ್ದಾರೆ.

‘ಡೇ ಜೀರೋ’ ಎಂದರೆ ನೀರು ಇಲ್ಲದ ದಿನ!

ಡೇ ಜೀರೋ ಎಂದರೆ ನೀರು ಇಲ್ಲದ ದಿನ. ಅಧ್ಯಯನ ವರದಿ ಪ್ರಕಾರ ಇದು ಭವಿಷ್ಯದಲ್ಲಿ ಯಾವಾಗಲೋ ಸಂಭವಿಸಬಹುದಾದ ವಿನಾಶಕಾರಿ ಆಪತ್ತಲ್ಲ. ಇತ್ತೀಚಿಗೆ ನಡೆದ ಕೆಲವು ಸರ್ವೇಗಳ ಪ್ರಕಾರ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ ಮತ್ತು ಭಾರತದ ಬೆಂಗಳೂರಿನಂಥ ಕೆಲವು ನಗರಗಳಲ್ಲಿ ಈ ಸನ್ನಿವೇಶ ಅತ್ಯಂತ ತ್ವರಿತವಾಗಿ ಎದುರಾಗಲಿದೆ. 2018ರಲ್ಲಿ ಅದರ ಪ್ರಮುಖ ಜಲಾಶಯದ ನೀರಿನ ಪ್ರಮಾಣ ಶೇ.14ಕ್ಕೆ ಕುಸಿದು ನೀರಿಲ್ಲದಂತಾಗಿತ್ತು. ಈ ವೇಳೆ ಕೇಪ್‌ಟೌನ್‌ ನಗರವು ಕಠಿಣವಾದ ಕ್ರಮಗಳನ್ನು ತೆಗೆದುಕೊಂಡು ಪ್ರತಿ ಮನುಷ್ಯರಿಗೆ ಪ್ರತಿ ದಿನಕ್ಕೆ ಕೇವಲ 50 ಲೀಟರ್‌ ನೀರೆಂದು ನಿಗದಿಗೊಳಿಸಿ ತಾನೆದುರಿಸಬೇಕಿದ್ದ ಶೂನ್ಯ ದಿನವನ್ನು ಏಪ್ರಿಲ್‌ನಿಂದ ಜುಲೈಗೆ ಮುಂದೂಡುವಲ್ಲಿ ಯಶಸ್ವಿಯಾಗಿತ್ತು.

ಕಾವೇರಿಯಿಂದಲೇ ಡೇ ಜೀರೋ?

ಇದೇ ರೀತಿ ಬೆಂಗಳೂರು ಸಹ ಕೆಆರ್‌ಎಸ್‌ ಜಲಾಶಯದ ಕಾವೇರಿ ನೀರನ್ನೇ ನೆಚ್ಚಿಕೊಂಡಿದೆ. ಪ್ರತಿ ತಿಂಗಳು 1.5 ಟಿಎಂಸಿ ನೀರು ಬೆಂಗಳೂರಿಗೆ ಪೂರೈಸಲಾಗುತ್ತಿದೆ. 2013, 2018 ಸೇರಿದಂತೆ ಈಗಾಗಲೇ ಹಲವು ಬಾರಿ ಬೇಸಿಗೆ ವೇಳೆ ಕೆಆರ್‌ಎಸ್‌ ಜಲಾಶಯ ಡೆಡ್‌ಸ್ಟೋರೇಜ್‌ ತಲುಪಿತ್ತು. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿಲ್ಲದಿದ್ದರೂ ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ತಮಿಳುನಾಡಿಗೆ ಅದರ ಪಾಲು ನೀರು ಬಿಡಬೇಕು. ಹೀಗಾಗಿಯೇ ಬೆಂಗಳೂರಿಗೆ ಕುಡಿಯುವ ನೀರು ಉಳಿಸಿಕೊಳ್ಳುವ ಸಲುವಾಗಿ 2018ರ ಏಪ್ರಿಲ್‌ನಲ್ಲೇ ಕೆಆರ್‌ಎಸ್‌ನಿಂದ ಕೃಷಿಗೆ ನೀರು ಬಿಡುವುದನ್ನು ನಿಲ್ಲಿಸಲಾಗಿತ್ತು. ಈ ವೇಳೆ ಜಲಾಶಯದಲ್ಲಿ 7 ಟಿಎಂಸಿ ನೀರು ಮಾತ್ರ ಇದ್ದು, 4.5 ಟಿಎಂಸಿ ಡೆಡ್‌ಸ್ಟೋರೇಜ್‌ ಇದೆ. ಬೆಂಗಳೂರಿನ ಕುಡಿಯುವ ಅಗತ್ಯತೆಗೆ ನೀರು ಬೇಕು, ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗದು ಎಂದು ನ್ಯಾಯಾಧೀಕರಣಕ್ಕೆ ಸರ್ಕಾರ ಮಾಹಿತಿ ನೀಡಿತ್ತು. ನ್ಯಾಯಾಧೀಕರಣ ಅದನ್ನು ಒಪ್ಪದಿದ್ದರೆ ಕಳೆದ ವರ್ಷವೇ ಬೆಂಗಳೂರಿಗೆ ನೀರಿಲ್ಲದಂತಾಗುತ್ತಿತ್ತು ಎನ್ನುತ್ತಾರೆ ತಜ್ಞರು.

2030ರವರೆಗೆ ನೀರಿನ ಅಭಾವವೇ ಇಲ್ಲ: ಜಲಮಂಡಳಿ

ಅಧ್ಯಯನ ವರದಿ ಬಗ್ಗೆ ಸ್ಪಂದಿಸಿದ ಜಲಮಂಡಳಿ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ, ಅಧ್ಯಯನ ಮಾಡಿದವರು ಯಾವ ಆಧಾರದಲ್ಲಿ ಡೇ ಜೀರೋ ಬರುತ್ತದೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಪ್ರಸ್ತುತ 19 ಟಿಎಂಸಿ ನೀರನ್ನು ನಿತ್ಯ ಪೂರೈಸುವ ಸಾಮರ್ಥ್ಯ ಹೊಂದಿದ್ದೇವೆ. ಕಾವೇರಿ 5ನೇ ಹಂತದ ಮೂಲಕ 10 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಪೂರೈಸುತ್ತೇವೆ. ನೀರಾವರಿ ಇಲಾಖೆ ಪ್ರಕಾರ 2023ರ ವೇಳೆಗೆ ಎತ್ತಿನ ಹೊಳೆಯಿಂದ 2.5 ಟಿಎಂಸಿ ಹೆಚ್ಚುವರಿ ನೀರು ನೀಡುತ್ತಾರೆ. ಇದಕ್ಕಾಗಿ ತಿಪ್ಪಗೊಂಡನಹಳ್ಳಿ ಜಲಾಶಯ ಸಿದ್ಧಗೊಳಿಸುತ್ತಿದ್ದೇವೆ. ಹೀಗಾಗಿ 2030ಕ್ಕೆ ಬೆಂಗಳೂರು ಒಣಗಲಿದೆ ಎಂದು ಹೇಳಲಾಗದು. ಸಮಸ್ಯೆಯಾದರೆ ಬೇಸಿಗೆ ಕಾಲದಲ್ಲಿ ಆಗಬಹುದು ಅಷ್ಟೇ ಎಂದರು.

ತ್ಯಾಜ್ಯ ನೀರನ್ನೂ ಸಹ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ಮಾಡುತ್ತಿದ್ದೇವೆ. ಕೇಪ್‌ಟೌನ್‌ ನಗರಕ್ಕೂ ಬೆಂಗಳೂರಿಗೆ ಹೋಲಿಕೆ ಮಾಡಲಾಗುವುದಿಲ್ಲ. ಮಳೆ ಪ್ರಮಾಣದಲ್ಲಿ ದಕ್ಷಿಣ ಭಾರತದಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ನಾವು ವಿಷನ್‌ 2025, 2050ರವರೆಗೆ ಎಲ್ಲಾ ರೀತಿ ಕ್ರಮವನ್ನೂ ಕೈಗೊಂಡಿದ್ದು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.

ಬೆಂಗಳೂರಿನ ಒಡಲು ಬರಿದಾಗಲು ಕಾರಣಗಳು?

*ಯಾವುದೇ ಜೀವನದಿ ಇಲ್ಲದಿದ್ದರೂ ಬೆಂಗಳೂರು ನಗರ ಮಿತಿ ಮೀರಿ ಬೆಳೆಯುತ್ತಿದ್ದು, ಕಾಂಕ್ರೀಟ್‌ ಕಾಡಾಗುತ್ತಿರುವುದು ಹಾಗೂ ಜನಸಂಖ್ಯೆ ಏರುತ್ತಿರುವುದು ನೀರಿನ ಸಮಸ್ಯೆಗೆ ಪ್ರಮುಖ ಕಾರಣ.

*ಕೆರೆಗಳ ನಗರವಾಗಿಯೇ ಹೆಸರು ಮಾಡಿದ್ದ ಬೆಂಗಳೂರಿನ ಶೇ.79 ರಷ್ಟುಕೆರೆಗಳು ಈಗಾಗಲೇ ನಾಶವಾಗಿವೆ. ಹಾಲಿ ಇರುವ ಕೆರೆಗಳೂ ಕಲುಷಿತಗೊಂಡಿದ್ದು, ಮನುಷ್ಯ ಸ್ನಾನ ಮಾಡಲೂ ಯೋಗ್ಯವಲ್ಲ ಎಂದು ಖಚಿತಪಡಿಸಲಾಗಿದೆ.

*ಅಂತರ್ಜಲ ಅತಿಯಾದ ಬಳಕೆ ಹಾಗೂ ನೀರು ಮರುಪೂರಣದ ವೈಫಲ್ಯದಿಂದಾಗಿ ಕಳೆದ ಎರಡು ದಶಕದಲ್ಲಿ ನಗರದ ಅಂತರ್ಜಲ ಮಟ್ಟ60 ಮೀಟರ್‌ ಕುಸಿದಿದೆ. 1,200-1500 ಅಡಿ ಕೊಳವೆ ಬಾವಿ ಕೊರೆದರೂ ನೀರಿಲ್ಲದಂತಾಗಿದೆ. ಸದ್ಯದಲ್ಲೇ ಸಂಪೂರ್ಣ ಒಣಗಲಿದೆ.

*ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ 2ನೇ ನಗರ ಬೆಂಗಳೂರು. ಪ್ರತಿ ವರ್ಷ ವಾರ್ಷಿಕ ಸರಾಸರಿ 900 ಮಿ.ಮೀ. ಮಳೆಯಾದರೂ ಮಳೆ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿಲ್ಲ. ಮಳೆ ನೀರು ಕೊಯ್ಲು ಅಳವಡಿಕೆಯೂ ಯಶಸ್ವಿಯಾಗಿಲ್ಲ.

*ಶತಮಾನದ ಕಾಲ ಬೆಂಗಳೂರಿನ ಜೀವ ಜಲವಾಗಿ ದಾಹ ಹಿಂಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ನೀರುಣಿಸುವುದನ್ನು ನಿಲ್ಲಿಸಿದೆ.

*ಬೆಂಗಳೂರು ಕುಡಿಯುವ ನೀರು ಸೇರಿದಂತೆ ಎಲ್ಲಾ ಬಳಕೆಗೂ ಕಾವೇರಿ ನೀರಿನ ಮೇಲೆಯೇ ಆಧಾರವಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಯಾವ ವರ್ಷ ಮಳೆಯ ಪ್ರಮಾಣ ಕುಸಿದರೂ ಬೆಂಗಳೂರಿಗೆ ‘ಡೇ ಜೀರೋ’ ವಕ್ಕರಿಸಬಹುದು.

ಪರಿಹಾರಗಳು

*ರಾತ್ರೋ ರಾತ್ರಿ ಸಮಸ್ಯೆ ಬಗೆಹರಿಸಬಹುದಾದ ಯಾವ ಪರಿಹಾರವೂ ಇಲ್ಲ. ಬದಲಿಗೆ ಸಮಸ್ಯೆಗೆ ಕಾರಣ ಪತ್ತೆ ಮಾಡಿ ದೀರ್ಘ ಕಾಲಿನ ಯೋಜನೆಗಳಿಂದ ಪರಿಹಾರ ಪಡೆಯಬಹುದು.

*ನೀರಿನ ಮಹತ್ವ ಅರಿತು ಪ್ರತಿ ಹನಿ ನೀರನ್ನೂ ಮಿತಬಳಕೆ ಮಾಡಲು ಜಾಗೃತಿ ಮೂಡಿಸಬೇಕಿದೆ. ಸಾರ್ವಜನಿಕರು ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು.

*ಅಂತರ್ಜಲ ಮರುಭರ್ತಿಯ ಅಗತ್ಯ, ಅನಿವಾರ್ಯ ಅರಿತು ಮಳೆ ನೀರು ಹಿಂಗಿಸಲು ಸೂಕ್ತ ಕಾರ್ಯಕ್ರಮ ರೂಪಿಸಬೇಕು.

*ಕಾವೇರಿ ನದಿಯನ್ನೇ ಅತಿಯಾಗಿ ನೆಚ್ಚಿಕೊಳ್ಳದೆ ಪರ್ಯಾಯ ಯೋಜನೆಗಳನ್ನು ಯೋಚಿಸಬೇಕು. ಕಾವೇರಿ ಅಚ್ಚು ಕಟ್ಟು ಪ್ರದೇಶದಲ್ಲಿ ಆಗುತ್ತಿರುವ ಅರಣ್ಯನಾಶ, ಪರಿಸರ ನಾಶ ತಡೆಯಬೇಕು.

*ನಗರ ಕಾಂಕ್ರೀಟ್‌ ಕಾಡಾಗುವುದನ್ನು ತಡೆದು, ಅಂತರ್ಜಲ ಅತಿಯಾದ ಶೋಷಣೆಯನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕು.

*ಶುದ್ಧೀಕರಿಸಿದ ತ್ಯಾಜ್ಯ ನೀರು ಪುನರ್‌ಬಳಕೆ ಮಾಡಬೇಕು. ಇದಕ್ಕಾಗಿ ಯೋಜಿಸಿದ್ದ ಪೈಪ್‌ಲೈನ್‌ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.

Comments are closed.