ಕರ್ನಾಟಕ

ಸಾವಿನಲ್ಲೂ ಒಂದಾದ ಸಂಗ್ಯಾಬಾಳ್ಯ!

Pinterest LinkedIn Tumblr


ಬೆಂಗಳೂರು: ಅವರಿಬ್ಬರೂ ಆತ್ಮೀಯ ಸ್ನೇಹಿತರು. ಸಂಗ್ಯಾಬಾಳ್ಯ ಎಂದೇ ಸ್ನೇಹಿತರ ವರ್ಗದಲ್ಲಿ ಗುರುತಿಸಿಕೊಂಡವರು. ಅಷ್ಟೇ ಅಲ್ಲದೆ ನಟ ಗಣೇಶ್‌ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡವರು. ಮಾರೇಗೌಡ ಮತ್ತು ಪುಟ್ಟರಾಜು ಅವರನ್ನು ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟ ಬಲಿ ಪಡೆದಿದೆ. ಮೃತ ಹಿನ್ನೆಲೆಯ ನೋಟ ಇಲ್ಲಿದೆ.

ಎ.ಮಾರೇಗೌಡ (44)

ಅಡಕಮಾರನಹಳ್ಳಿ ಮಾರೇಗೌಡ (44) ಅವರು ಪತ್ನಿ ಲಕ್ಷ್ಮೇದೇವಿ ಮತ್ತು ಮಕ್ಕಳಾದ ಶ್ರೇಯಸ್‌ ಮತ್ತು ಶ್ವೇತಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದ ಮಾರೇಗೌಡ, ರಾಜಕೀಯದಲ್ಲೂ ಕೂಡಾ ಸಕ್ರಿಯರಾಗಿದ್ದರು. ಮಾಜಿ ವಿಧಾನಪರಿಷತ್‌ ಸದಸ್ಯ, ಸ್ಥಳೀಯ ಜೆಡಿಎಸ್‌ ನಾಯಕ ಇ.ಕೃಷ್ಣಪ್ಪ ಬೆಂಬಲಿಗರಾಗಿದ್ದರು. ಬೆಂಗಳೂರು- ತುಮಕೂರು ರಸ್ತೆಯಲ್ಲಿ ಅವರಿಗೆ ಜಮೀನು, ಗೋದಾಮು ಹಾಗೂ ವಾಣಿಜ್ಯ ಕಟ್ಟಡಗಳಿವೆ. ಮೃತರ ಪತ್ನಿ ಲಕ್ಷ್ಮೇದೇವಿ ಅವರು ಪ್ರಸುತ್ತ ದಾಸನಪುರ ಗ್ರಾಪಂ ಸದಸ್ಯರಾಗಿದ್ದಾರೆ. ಮಗಳ ಶ್ವೇತಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ಮಗ ಶ್ರೇಯಸ್‌ 7ನೇ ತರಗತಿ ವಿದ್ಯಾರ್ಥಿ. ಖ್ಯಾತ ಚಲನಚಿತ್ರ ನಟ ಗಣೇಶ್‌ ಅವರ ಬಾಲ್ಯದ ಸ್ನೇಹಿತರು.

ಎಚ್‌.ಪುಟ್ಟರಾಜು (38)

ನೆಲಮಂಗಲದ ಹತ್ತಿರದ ಹರೇಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ನಿವೃತ್ತ ನೌಕರ ಬಸವರಾಜು ಪುತ್ರ ಪುಟ್ಟರಾಜು (38). ದಾಸನಪುರ ಹೋಬಳಿಯಲ್ಲಿ ಮಾರೇಗೌಡ- ಬಸವರಾಜು ಅವರನ್ನು ‘ಸಂಗ್ಯಾ ಬಾಳ್ಯ’ ಜೋಡಿ ಎಂದೇ ಜನಜನಿತರಾಗಿದ್ದರು. ಪುಟ್ಟರಾಜು ಅವರಿಗೆ ಪತ್ನಿ ಕಾವ್ಯಾ ಮತ್ತು ಅಪೇಕ್ಷಾ ನಾಲ್ಕು ವರ್ಷದ ಹೆಣ್ಣು ಮಗುವಿದೆ. ರಿಯಲ್‌ ಎಸ್ಟೇಟ್‌ ಮತ್ತು ರಾಜಕೀಯದಲ್ಲಿ ಅವರು ಸಕ್ರಿಯರಾಗಿದ್ದರು. ಇವರು ಸಹ ಮಾಜಿ ವಿಧಾನಪರಿಷತ್‌ ಸದಸ್ಯ ಇ.ಕೃಷ್ಣಪ್ಪ ಬೆಂಬಲಿಗರಾಗಿದ್ದರು. ಪುಟ್ಟರಾಜು ಮಾಜಿ ಗ್ರಾಪಂ ಸದಸ್ಯರು.

ಎಸ್‌.ಆರ್‌.ನಾಗರಾಜ ರೆಡ್ಡಿ (47)

ರಿಯಲ್‌ ಎಸ್ಟೇಟ್‌ ಉದ್ಯಮಿ ಎಸ್‌.ಆರ್‌.ನಾಗರಾಜ್‌ ರೆಡ್ಡಿ ಅವರು, ತಮ್ಮ ಪತ್ನಿ ಯಶೋಧಾ ಮತ್ತು ಮೂವರು ಮಕ್ಕಳ ಜತೆ ಬಿಎಂಟಿಎಂ ಲೇಔಟ್‌ನಲ್ಲಿ ನೆಲೆಸಿದ್ದರು. ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಸಂಬಂಧಿಕರು. ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಆಪ್ತರಾಗಿದ್ದ ನಾಗರಾಜ್‌ ಅವರು, ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡರಾಗಿದ್ದರು. ಇನ್ನು ಅವರ ಮಕ್ಕಳ ಪೈಕಿ ಹಿರಿಯ ಮಗಳಿಗೆ ವಿವಾಹವಾಗಿದೆ. ಪುತ್ರ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಅಲ್ಲದೆ, ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಶ್ರೀಲಂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉದ್ಯಮಿ ಪುರುಷೋತ್ತಮ್‌ ಅವರ ತಂಗಿಯನ್ನು ನಾಗರಾಜ್‌ ವಿವಾಹವಾಗಿದ್ದರು. ಇನ್ನು ಪುರುಷೋತ್ತಮ್‌ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಬೀಗರಾಗಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಜಿ.ಎನ್‌.ಆರ್‌.ಬಾಬು ಅವರ ದೊಡ್ಡಪ್ಪನ ಮಗ ನಾಗರಾಜ್‌ ರೆಡ್ಡಿ.

Comments are closed.