ಕರ್ನಾಟಕ

ಶ್ರೀಲಂಕಾ ಸರಣಿ ಬಾಂಬ್​ ಸ್ಪೋಟದಲ್ಲಿ ಸಾವಿಗೀಡಾದ ಮೃತ ಕನ್ನಡಿಗರ ಅಂತಿಮ ದರ್ಶನ ಪಡೆದ ದೇವೇಗೌಡ, ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಭಾನುವಾರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಸಾವಿಗೀಡಾಗಿದ್ದ ಐವರು ಕನ್ನಡಿಗರ ಮೃತದೇಹ ನಿನ್ನೆ ತಡರಾತ್ರಿ ಬೆಂಗಳೂರು ತಲುಪಿದೆ. ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೃತ ಜೆಡಿಎಸ್ ಮುಖಂಡರಾದ ಕೆ.ಜಿ. ಹನುಮಂತರಾಯಪ್ಪ, ಎಂ. ರಂಗಪ್ಪ ಅವರ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ದಾಸರಹಳ್ಳಿಯಲ್ಲಿ ಹನುಮಂತರಾಯಪ್ಪ ಅಂತಿಮ ದರ್ಶನ ಪಡೆದರು. ಹನುಮಂತರಾಯಪ್ಪ ಪಾರ್ಥಿವ ಶರೀರ ನೆಲಮಂಗಲ ತಾಲೂಕು ಕಾಚನಹಳ್ಳಿಗೆ ರವಾನೆಯಾಗಲಿದೆ. ಎಚ್​ಡಿಡಿ ಮತ್ತು ಎಚ್​ಡಿಕೆ ಹನುಮಂತರಾಯಪ್ಪ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಹನುಮಂತರಾಯಪ್ಪ ಅಂತಿಮ ದರ್ಶನ ಪಡೆದ ಬಳಿಕ ಮಾಜಿ ಪ್ರಧಾನಿ ಎಚ್​​.ಡಿ. ದೇವೇಗೌಡ ಸಂತಾಪ ವ್ಯಕ್ತಪಡಿಸಿದರು. ಇದು ಅತ್ಯಂತ ಕೆಟ್ಟ ಘಟನೆ. ನಮ್ಮ ಪಕ್ಷದ ಆಸ್ತಿ, ನಮ್ಮ ಬಂಧುಗಳನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ. ಈಗ ನಾಲ್ಕು ಜನರ ಮೃತದೇಹ ಬಂದಿದೆ, ಇನ್ನು ಮೂರು ಜನದ್ದು ಬರಬೇಕು. ಇವರು ಏಳೂ ಜನ ನಮ್ಮ ಪಕ್ಷದ ಆಧಾರಸ್ಥಂಬವಾಗಿದ್ದರು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಉಗ್ರರು ಮಾಡಿರುವ ಈ ಕೃತ್ಯ ಹೇಯವಾದದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮಡಿದ ನಮ್ಮ ಪಕ್ಷದ ಕಾರ್ಯಕರ್ತರಾದ ರಂಗಪ್ಪ ಮತ್ತು ಹನುಮಂತರಾಯಪ್ಪ ಅವರ ಅಂತಿಮ ದರ್ಶನವನ್ನು ಪಡೆದೆ. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ. ಪಕ್ಷಕ್ಕೆ ಹಾಗೂ ಸಮಾಜಕ್ಕೆ ಈ ಇಬ್ಬರ ಕೊಡುಗೆಯೂ ಮಹತ್ವದ್ದು.

ಸಿಎಂ ಎಚ್​.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಅಂಬೇಡ್ಕರ್​ ಮೈದಾನಕ್ಕೆ ಆಗಮಿಸಿ ಮೃತ ಶಿವಕುಮಾರ್​, ಲಕ್ಷ್ಮೀ ನಾರಾಯಣ ಅಂತಿಮ ದರ್ಶನ ಪಡೆದರು. ಚೊಕ್ಕಸಂದ್ರದ ನಿವಾಸದಲ್ಲಿ ರಂಗಪ್ಪ ಅವರ ಅಂತಿಮ ದರ್ಶನ ಪಡೆದರು. ನಂತರ ನಾಗರಾಜ್​ ರೆಡ್ಡಿ ಅಂತಿಮ ದರ್ಶನ ಪಡೆದು, ಸಾಂತ್ವನ ಹೇಳಿದರು. ಅನೇಕ ಗಣ್ಯರು, ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 2 ಗಂಟೆಗೆ ಉಳಿದ 3 ಮೃತದೇಹಗಳು ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿವೆ. ತುಮಕೂರಿನ ರಮೇಶ್, ಅಡಕಮಾರನಹಳ್ಳಿ ಮಾರೇಗೌಡ, ಹಾರೋಕ್ಯಾತನಹಳ್ಳಿಯ ಪುಟ್ಟರಾಜು ಮೃತದೇಹ ತವರಿಗೆ ಆಗಮಿಸಲಿವೆ.

Comments are closed.