ಬಾಗಲಕೋಟೆ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್ನವರು. ಮಹಾತ್ಮ ಗಾಂಧಿಗೆ ಗುಂಡಿಟ್ಟು ಕೊಂದವನು ನಾತುರಾಂ ಗೋಡ್ಸೆ. ಗೋಡ್ಸೆ ಆರ್ಎಸ್ಎಸ್ನವನು. ನರೇಂದ್ರ ಮೋದಿ ಕೂಡ ಗೋಡ್ಸೆ ವಂಶಕ್ಕೆ ಸೇರಿದವನು ಎಂದು ಪ್ರಧಾನಿ ವಿರುದ್ಧ ಮಾಜಿ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯ ಕೆರೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಜೈಲಿಗೆ ಹೋಗಿ ಬಂದ ಅಮಿತ್ ಶಾ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ರಾಜ್ಯಾಧ್ಯಕ್ಷ. ಇವರೆಲ್ಲರೂ ಚೌಕಿದಾರರಾ? ಎಂದು ಹರಿಹಾಯ್ದಿದ್ದಾರೆ.
ನೂರಕ್ಕೆ ನೂರರಷ್ಟು ರಾಹುಲ್ ಗಾಂಧಿ ಪ್ರಧಾನಿಯಾಗಿಯೇ ಆಗುತ್ತಾರೆ. ಅದರಲ್ಲಿ ಅನುಮಾನವೇ ಇಲ್ಲ. ನುಡಿದಂತೆ ನಡೆದ ರಾಹುಲ್ ಗಾಂಧಿ ಪ್ರಧಾನಿಯಾದ ನಂತರ ಬಾಗಲಕೋಟೆಗೆ ಕರೆದುಕೊಂಡು ಬರುತ್ತೇನೆ. ನರೇಂದ್ರ ಮೋದಿಯಂತಹ ಸುಳ್ಳುಗಾರ ಪ್ರಧಾನಿಯನ್ನು ಭಾರತ ಇದುವರೆಗೂ ಕಂಡೇ ಇಲ್ಲ. ಬಾಯಿ ಬಡಾಯಿಯೇ ಮೋದಿಯ ಸಾಧನೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ನನ್ನ ಚುನಾವಣೆಯ ಬಹಿರಂಗ ಪ್ರಚಾರದ ಭಾಷಣವನ್ನು ಕೆರೂರಿನಲ್ಲಿ ಮಾಡುತ್ತಿದ್ದೇನೆ. ಬಾದಾಮಿ ನನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ. ಮೈಸೂರಲ್ಲಿ ನಾನು 7 ಬಾರಿ ಗೆದ್ದಿದ್ದೆ.ಆದರೆ, ಮೈಸೂರಲ್ಲಿ 8ನೇ ಬಾರಿ ಸ್ಪರ್ಧಿಸಿದಾಗ ನನ್ನನ್ನು ಸೋಲಿಸಿದರು. ಆಗ ಬಾದಾಮಿ ಜನರು ನನ್ನನ್ನು ಗೆಲ್ಲಿಸಿದರು. ಬಾದಾಮಿಯ ಭಾರ ನನ್ನ ಮೇಲಿದೆ. ಈ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ಆಸೆಯಿದೆ. ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್ ವಿರುದ್ಧ ವೀಣಾ ಕಾಶಪ್ಪನವರ್ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು. ವೀಣಾಗೆ ಮತ ಹಾಕಿದರೆ ನನ್ನನ್ನು ಗೆಲ್ಲಿಸಿದಂತೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.