ಕರ್ನಾಟಕ

ಮೋದಿ ಮೊದಲು ಬಿಜೆಪಿಯ ಕುಟುಂಬ ರಾಜಕಾರಣ ಕೊನೆಗಾಣಿಸಲಿ: ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ

Pinterest LinkedIn Tumblr


ಚಿಕ್ಕಮಗಳೂರು: ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಅವರು ಮೊದಲು ತಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಕೊನೆಗಾಣಿಸಲಿ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.

ಮೋದಿ ಅವರು ಕುಟುಂಬ ರಾಜಕಾರಣದ ನಿಜವಾದ ವಿರೋಧಿಯಾಗಿದ್ದರೆ ಬಿ.ಎಸ್.ಯಡಿಯೂರಪ್ಪ ಅವರ ಮಗನಿಗೇ ಟಿಕೆಟ್ ನಿರಾಕರಿಸಬೇಕಿತ್ತು. ಅಂತಹ ನಿರ್ಧಾರ ಮಾಡದೆ ಬೇರೆ ಪಕ್ಷಗಳತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ದೇವೇಗೌಡ ಮತ್ತು ಅವರ ಕುಟುಂಬದವರು ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸ್ಪರ್ಧೆ ಮಾಡಬಹುದೆಂಬುದನ್ನು ಮರೆಯಬಾರದು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಳುಮುಂಜಿ ಎಂದಿರುವ ನರೆಂದ್ರ ಮೋದಿ ಭಾವನೆಗಳೇ ಇಲ್ಲದ ವ್ಯಕ್ತಿ. ಭಾವನಾತ್ಮಕ ಜೀವಿಯಾಗಿರುವ ಕುಮಾರಸ್ವಾಮಿ, ಕಷ್ಟದಲ್ಲಿರುವ ಜನರನ್ನು ನೋಡಿದಾಗ ಭಾವತೀವ್ರತೆಯಿಂದ ಕಣ್ಣೀರು ಹಾಕಿರುವುದನ್ನು ಪ್ರಧಾನಿ ಮನಗಾಣುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

ಸಾಲ ಮನ್ನಾ ಆಗಿಲ್ಲವೆಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು, ವಿವಿಧ ಬ್ಯಾಂಕುಗಳಿಗೆ ಈಗಾಗಲೆ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರಾದ ಸಾವಿರಾರು ಜನರ ಸಾಲ ಮನ್ನಾ ಆಗಿದ್ದು, ಈ ದಾಖಲೆಗಳನ್ನು ಪ್ರಧಾನಿ ತರಿಸಿಕೊಳ್ಳಲಿ ಎಂದು ಹೇಳಿದರು.

ಸರ್ಕಾರ ಪತನ ಹಗಲುಗನಸು: ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕ ಸಿ.ಟಿ.ರವಿ ಹಗಲುಗನಸು ಕಾಣುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಲೇವಡಿ ಮಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬಾಂಧವ್ಯ ಲೋಕಸಭೆ ಚುನಾವಣೆಯಲ್ಲಿ ಮತ್ತಷ್ಟು ಗಟ್ಟಿಯಾಗಿದ್ದು, ಸರ್ಕಾರ ಪತನದ ಯಡಿಯೂರಪ್ಪ ಕನಸು ಮರೀಚಿಕೆಯಾಗಲಿದೆ. ಸರ್ಕಾರ ಸುಭದ್ರವಾಗಿದ್ದು, ಮುಂಬರುವ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಮತ್ತಷ್ಟು ಜನಪರ ಯೋಜನೆ ಜಾರಿ ಮಾಡಲಿದೆ ಎಂದರು.

Comments are closed.