ಕರ್ನಾಟಕ

ಸಿದ್ದು ಟೈಂ ಬಾಂಬ್, ರೇವಣ್ಣ ನಿಂಬೆ ಜಾತಕ: ಆರ್. ಅಶೋಕ್

Pinterest LinkedIn Tumblr


ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಈ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಯಾವಾಗ ಸಿಡಿಯುತ್ತೋ ಅಂತಾ ಅವರನ್ನೇ ಕೇಳಬೇಕು. ಅವರು ಈಗಾಗಲೇ ನಾನೇ ಸಿಎಂ ಅಂತಾ ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಟೀಕಿಸಿದರು. ಇಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಆರ್. ಅಶೋಕ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಭ್ರಮನಿರಸನರಂತೆ ಮಾತನಾಡುತ್ತಿದ್ದಾರೆ. ಹತಾಶರಾಗಿ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಪಕ್ಷದಿಂದ ಪಕ್ಷಕ್ಕೆ‌ ಜಂಪ್ ಹೊಡೆಯುವ ಸಿದ್ದರಾಮಯ್ಯ ಅವರು, ಜೆಡಿಎಸ್, ಕಮ್ಯೂನಿಸ್ಟ್‌ ಸೇರಿ ಎಲ್ಲ ಓಡಾಡಿ ಬಂದವರು. ಇವರಿಂದ ನಾವು ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಹಾಸನ, ತುಮಕೂರು ಮತ್ತು ಮಂಡ್ಯದಲ್ಲಿ ಜೆಡಿಎಸ್ ಪಕ್ಷ ಗೆಲ್ಲುತ್ತದೆ. ತಾನು ಹೇಳಿದ ಜ್ಯೋತಿಷ್ಯ ಸುಳ್ಳಾಗುವುದಿಲ್ಲ ಎಂದು ಹೆಚ್.ಡಿ. ರೇವಣ್ಣ ಅವರ ಹೇಳಿಕೆಗೆ ಆರ್. ಅಶೋಕ್ ತಿರುಗೇಟು ನೀಡಿದರು. ರೇವಣ್ಣ ಮೊದಲು ನಿಂಬೆ ಹಣ್ಣು ಜಾತಕ ಬಿಡಬೇಕು. ಈಗೇನಿದ್ದರೂ ಕಂಪ್ಯೂಟರ್ ಕಾಲವಾಗಿದೆ. ರಾಜ್ಯದಲ್ಲಿ ಬಿಜೆಪಿ 22 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿ ನಾಯಕ ಅಭಿಪ್ರಾಯಪಟ್ಟರು.

ಮೋದಿ ಸಂವಿಧಾನಕ್ಕೆ ಬೆಲೆ ಕೊಡುವುದಿಲ್ಲ ಎಂಬ ಟೀಕೆಯನ್ನು ತಳ್ಳಿಹಾಕಿದ ಆರ್. ಅಶೋಕ್, ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚು ಸಂವಿಧಾನಕ್ಕೆ ಬೆಲೆ ಕೊಟ್ಟವರು ಯಾರೂ ಇಲ್ಲ. ಸಂಸತ್ತಿನಲ್ಲಿ ರಾಹುಲ್ ಕಣ್ಣು ಹೊಡೆಯುತ್ತಾರೆ. ಅವರು ಪ್ರಧಾನಿ ಆಗುವುದು ಹುಚ್ಚರ ಕನಸು ಎಂದು ಲೇವಡಿ ಮಾಡಿದರು.

ಅಭ್ಯರ್ಥಿ ಆಯ್ಕೆಯಲ್ಲೇ ಮೈತ್ರಿ ಪಕ್ಷಗಳು ಜನರ ವಿಶ್ವಾಸ ಕಳೆದುಕೊಂಡಿವೆ. ರೈತರ ಸಾಲ ಮನ್ನಾ ಇನ್ನೂ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಅಶೋಕ್ ಹೇಳಿದ್ದಾರೆ.

ಮೂರು ವರ್ಷಕ್ಕೆ ಒಮ್ಮೆ ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ತಾಲೂಕು ಅಧ್ಯಕ್ಷರವರೆಗೆ ಬದಲಾವಣೆ ಆಗುತ್ತದೆ. ಅದೇ ರೀತಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಬಹುದು. ಇದರಲ್ಲಿ ಹೊಸದೇನೂ ಇಲ್ಲ. ಸ್ವತಃ ಬಿಎಸ್​ವೈ ಅವರೇ ರಾಜ್ಯಾಧ್ಯಕ್ಷ ಆಗಲ್ಲ ಅಂತಾ ಹೇಳಿದಾರೆ ಎಂದು ಅಶೋಕ್ ಸ್ಪಷ್ಟನೆ ನೀಡಿದರು.

ಲೋಕಸಭೆ ಚುನಾವಣೆ ನಂತರ ಕರ್ನಾಟಕದ ಮೈತ್ರಿ ಸರ್ಕಾರ ಬೀಳೋದು ಖಚಿತ. ಇವರ ಅಗ್ರಿಮೆಂಟ್ ಆಗಿರೋದು ಲೋಕಸಭೆ ಚುನಾವಣೆಗೆ ಮಾತ್ರ. ಒಲ್ಲದ ಮನಸ್ಸಿನಿಂದ ಸಿದ್ದರಾಮಯ್ಯ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹತಾಶರಾಗಿ ಮಾತನಾಡುತ್ತಿದ್ದಾರೆ. ಜಿ.ಪರಮೇಶ್ವರ್​ ಅವರಿಗೆ ಅಪಮಾನ ಮಾಡಬೇಕು ಎಂಬ ಕಾರಣಕ್ಕೆ ತುಮಕೂರು ಬಿಟ್ಟು ಕೊಡಲಾಗಿದೆ. ಕಾಂಗ್ರೆಸ್‌ನವರೇ ತಂಗಡಗಿ ಅವರನ್ನು ಅಡ್ರೆಸ್ ಇಲ್ಲದಂತೆ ಮಾಡಿದ್ದಾರೆ. ಮೇ 23ರ ನಂತರ‌ ಮತ್ತೆ ಸಿಎಂ ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮೂರು ಕಡೆ ಸೋಲು ಅನುಭವಿಸುತ್ತಾರೆ. ಚುನಾವಣೆ ನಂತರ ಸರ್ಕಾರ ಪತನವಾಗಲಿದೆ ಎಂದೂ ಬಿಜೆಪಿ ನಾಯಕ ಆರ್. ಅಶೋಕ್ ಭವಿಷ್ಯ ನುಡಿದರು.

Comments are closed.