ಕರ್ನಾಟಕ

ಉಮೇಶ್​ ಜಾಧವ್​ ಗೋಮುಖ ವ್ಯಾಘ್ರ, ಆತನಿಗೆ ನಿಯತ್ತು ಇಲ್ಲ; ಸಿದ್ದರಾಮಯ್ಯ

Pinterest LinkedIn Tumblr


ಕಲಬುರಗಿ: “ಉಮೇಶ್​ ಜಾಧವ್​ ನನ್ನ ಬಳಿ ಖರ್ಗೆ ವಿರುದ್ಧ ದೂರು ಹೇಳಿಕೊಂಡು ಬರುತ್ತಿದ್ದ. ಅವನ್ನು ನಾನು ಸಮಾಧಾನ ಮಾಡುತ್ತಿದ್ದೆ. ಆರು ವರ್ಷ ಅಸೆಂಬ್ಲಿಯಲ್ಲಿದ್ದ ಪಾರ್ಲಿಮೆಂಟ್ ಸೆಕ್ರೆಟರಿ ಮಾಡಿದ್ದೆ. ಎಷ್ಟು ಸಹಾಯ ಮಾಡಿದ್ದೆ, ಚೆನ್ನಾಗಿದ್ದಾನೆ ಅಂದುಕೊಂಡಿದ್ದೆ. ಆದರೆ ಆತನಿಗೆ ನಿಯತ್ತಿಲ್ಲ. ಗೋಮುಖ ವ್ಯಾಘ್ರ,” ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಈಗ ಖರ್ಗೆ ವಿರುದ್ಧ ಕಮಲದಿಂದ ಸ್ಪರ್ಧೆ ಮಾಡಿರುವ ಉಮೇಶ್​ ಜಾಧವ್​ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಅಫಜಲಪುರದಲ್ಲಿ ಮಾತನಾಡಿದ ಅವರು, “ಉಮೇಶ್​​ ಜಾಧವ್ ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದುಕೊಂಡಿದ್ದೆ. ​ಯಾವ ಕಾರಣಕ್ಕೆ ತನ್ನನ್ನು ತಾನು ಮಾರಿಕೊಂಡ ಎಂದು ಗೊತ್ತಾಗಿಲ್ಲ,” ಎಂದು ಅವರ ವಿರುದ್ಧ ಹರಿಹಾಯ್ದರು.

“ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ನಾಯಕರು. 11 ಬಾರಿ ಆಯ್ಕೆಯಾಗಿ, 12ನೇ ಬಾರಿ ನಿಮ್ಮ ಮುಂದಿದ್ದಾರೆ. ಖರ್ಗೆ 11 ಬಾರಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅವರನ್ನು ಸೋಲಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖರ್ಗೆ ವಿಪಕ್ಷ ನಾಯಕರಾಗಿ ನರೇಂದ್ರ ಮೋದಿ ವೈಫಲ್ಯ,ಭ್ರಷ್ಟಾಚಾರ ಬಯಲು ಮಾಡುವ ಪ್ರಾಮಾಣಿಕ ಕೆಲಸ ಮಾಡಿದರು. ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಕಂಡರೆ ಹೆದರಿಕೆಯಿದೆ. ಹೀಗಾಗಿ ಖರ್ಗೆ ಸೋಲಿಸಲು ಮೋದಿ, ಷಾ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಉಮೇಶ್​ ಜಾಧವ್​ರನ್ನು ಬಳಸಿಕೊಳ್ಳು ಮುಂದಾಗಿದ್ದಾರೆ ಎಂದರು.

ಖರ್ಗೆ ರಾಷ್ಟ್ರೀಯ ನಾಯಕ ಅವರಿಂದ ಅಭಿವೃದ್ಧಿ ಸಾಧ್ಯ. ಉಮೇಶ್​ ಜಾಧವ್​ ಬಂದರೆ ಅವರಿಂದ ಏನು ಸಾಧ್ಯ. ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿದ್ರೆ ನಿಮಗೆ ಗೌರವ. ಅವರಿಗೆ ಮತ ನೀಡಿ. ಸುಳ್ಳು ಭರವಸೆಗಳುಗೆ ಬಲಿಯಾಗ ಬೇಡಿ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಹೆಲಿಪ್ಯಾಡ್​ನಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಅವರು, ರಾಜ್ಯದಲ್ಲಿ ನಾವು 20 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಅವರಿಗೆ ಏನು ದಿವ್ಯ ಜ್ಞಾನ ಇದೆಯಾ. ಅವರು ಬುರುಡೆ ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಅವರ ಕೈಯಲ್ಲಿದ್ದ ನಿಂಬೆ ಹಣ್ಣಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಯಾರೋ ವಿಮಾನ ನಿಲ್ದಾಣದಲ್ಲಿ ಕೊಟ್ಟರು ಇಟ್ಟುಕೊಂಡು ಬಂದೆ. ಇದರಲ್ಲಿ ಎಲ್ಲ ನನಗೆ ನಂಬಿಕೆ ಇಲ್ಲ ಎಂದು ವರದಿಗಾರರ ಕೈಗೆ ನೀಡಿದರು.

Comments are closed.