ಕರ್ನಾಟಕ

ನಾನು ಯಾರ ವಿರುದ್ಧವೂ ಸ್ಪರ್ಧೆ ಮಾಡುತ್ತಿಲ್ಲ, ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ: ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ

Pinterest LinkedIn Tumblr

ಬೆಂಗಳೂರು: ನಾನು ಯಾರ ವಿರುದ್ಧವೂ ಸ್ಪರ್ಧೆ ಮಾಡುತ್ತಿಲ್ಲ. ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹೇಳಿದ್ದಾರೆ.

ಹಾಲಿ ಲೋಕಸಭೆ ಚುನಾವಣೆಯ ನಿಮಿತ್ತ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು, ಇಂದು ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನಲೆಯಲ್ಲಿ ಇಂದು ನಟ ಪ್ರಕಾಶ್ ರೈ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಯಾರ ವಿರುದ್ಧವೂ ಸ್ಪರ್ಧೆ ಮಾಡುತ್ತಿಲ್ಲ. ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಉತ್ತಮ ನಾಯಕನನ್ನು ಆರಿಸಿದರೆ ಪ್ರಜೆಗಳು ಗೆದ್ದಂತೆ. ಕೆಟ್ಟ ನಾಯಕನನ್ನು ಆಯ್ಕೆ ಮಾಡಿದರೆ ಪ್ರಜೆಗಳು ಸೋತಂತೆ ಎಂದು ಹೇಳಿದರು.

ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ಎಸ್ ಸಿದ್ಧಾಂತಗಳನ್ನು ವಿರೋಧಿಸಿ ನಟ ಪ್ರಕಾಶ್ ರೈ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರು. ಬಳಿಕ ತಮ್ಮದೇ ಜಸ್ಟ್ ಆಸ್ಕಿಂಗ್ (Just Asking) ಅಭಿಯಾನ ಹಮ್ಮಿಕೊಂಡಿದ್ದ ಪ್ರಕಾಶ್ ರೈ ಕೇಂದ್ರ ಸರ್ಕಾರವನ್ನು ಆಗಾಗ ತರಾಟಗೆ ತೆಗೆದುಕೊಳ್ಳುತ್ತಿದ್ದರು. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಇನ್ನು ಕರ್ನಾಟಕದ 14 ಕ್ಷೇತ್ರಗಳಲ್ಲಿ ಇದೇ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಇಂದು ಸಂಜೆಯವರೆಗೆ ಪ್ರಚಾರಕ್ಕೆ ಅವಕಾಶವಿದ್ದು ನಂತರ ಮನೆಮನೆ ಪ್ರಚಾರ ಮಾತ್ರ ನಡೆಸಲು ಅನುಮತಿಯಿದೆ. ಕೊನೆಯ ದಿನ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಸರ್ಕಸ್ ನಡೆಸುತ್ತಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಈ ದಿನದ ಮೇಲೆ ಆಯೋಗ ಹದ್ದಿನಕಣ್ಣನ್ನು ಇಟ್ಟಿದೆ.

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಇದೇ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮತದಾನ ಮುಕ್ತಾಯಕ್ಕೆ 48 ತಾಸು ಮುನ್ನ ಅಂದರೆ ಇಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಸ್ಥಳೀಯ ಮತದಾರರಲ್ಲದ ನಾಯಕರೂ ಇಂದು ಸಂಜೆಯೇ ಕ್ಷೇತ್ರಗಳನ್ನು ಬಿಟ್ಟು ಹೊರಡಬೇಕಾಗುತ್ತದೆ. ಈ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳು ರೋಡ್ ಶೋ ನಡೆಸಿ ಮತಯಾಚನೆ ನಡೆಸುತ್ತಾರೆ. ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಬಳಿಕ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಬುಧವಾರ ಮನೆ ಮನೆ ಪ್ರಚಾರ ನಡೆಸಲಿದ್ದಾರೆ.

Comments are closed.