ಕರ್ನಾಟಕ

ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದರೆ ತಪ್ಪೇನಿದೆ?; ಕುಮಾರಸ್ವಾಮಿಗೆ ಯಶ್​ ತಿರುಗೇಟು

Pinterest LinkedIn Tumblr


ಮಂಡ್ಯ: ಸುಮಲತಾ ಪರವಾಗಿ ನಾವು ಯಾಕೆ ಪ್ರಚಾರ ಮಾಡಬಾರದು? ನಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದರೆ ತಪ್ಪೇನಿದೆ? ಮಂಡ್ಯ ಯಾರ ಸ್ವತ್ತೂ ಅಲ್ಲ. ಯಾರದ್ದು ಸರಿ, ಯಾರದ್ದು ತಪ್ಪು ಎಂದು ಜನ ನೋಡುತ್ತಿದ್ದಾರೆ ಎಂದು ರಾಕಿಂಗ್ ಸ್ಟಾರ್​ ಯಶ್​ ಜೆಡಿಎಸ್​ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸಿಎಂ ಕುಮಾರಸ್ವಾಮಿಯವರು ಸಿನಿಮಾರಂಗದವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಇಂದು ಅವರೇ ಸಿನಿಮಾದವರೆಂದು ಒಪ್ಪಿಕೊಂಡಿದ್ದಾರಲ್ಲ ಎಂದು ಯಶ್​ ವ್ಯಂಗ್ಯವಾಡಿದ್ದಾರೆ.

ಇಂದು ಚುನಾವಣಾ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ, ಇಂತಹ ನಟರನ್ನೆಲ್ಲ ನಾನು ಸಾಕಷ್ಟು ನೋಡಿದ್ದೇನೆ. ನಾನು ಕೂಡ ಸಿನಿಮಾ ನಿರ್ಮಾಪಕನಾಗಿದ್ದೆ. ಇಂತಹ ನಟರನ್ನು ಹಾಕಿಕೊಂಡು ನಾನು ಕೂಡ ಸಿನಿಮಾ ಮಾಡಿದ್ದೇನೆ. ಸಿನಿಮಾದಲ್ಲಿ ಹೇಳಿದಂತೆ ನಾಲ್ಕು ಡೈಲಾಗ್ ಹೇಳಿ ವಾಪಾಸ್​ ಹೋಗುತ್ತಾರಷ್ಟೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಯಶ್​ ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ.

ಸುಮ್ಮನೆ ನಮ್ಮ ಮೇಲೆ ವೈಯಕ್ತಿಕ ದಾಳಿ ನಡೆಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಸ್ವಾಭಿಮಾನಕ್ಕಾಗಿ ವಾಪಸ್ ಮಾತನಾಡೋ ಶಕ್ತಿ ಇದೆ. ಅವರೇನೇ ಹೇಳಿದರೂ ಕಾರ್ಯಕರ್ತರು ಸುಮ್ಮನಿದ್ದಾರೆ ಅಂದರೆ ಏನರ್ಥ? ಇದು ರೌಡಿ ರಾಜ್ಯ ಅಲ್ಲ, ಪ್ರಜಾಪ್ರಭುತ್ವದ ರಾಜ್ಯ. ಸುಮಲತಾ ಪರ ನಾವು ಪ್ರಚಾರ ಮಾಡಬಾರದಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು, ಪ್ರಚಾರದ ವೇಳೆ ಯಶ್​ ಬಗ್ಗೆ ನೇರಾನೇರ ವಾಗ್ದಾಳಿ ನಡೆಸಿದ್ದ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಅವನ್ಯಾರೋ ಯಶ್​ ಅಂತೆ. ಆತ ನಮ್ಮ ಪಕ್ಷವನ್ನು ಕಳ್ಳರ ಪಕ್ಷ ಎಂದು ಕರೆಯುತ್ತಾನೆ. ನನಗೋಸ್ಕರ ನಮ್ಮ ಕಾರ್ಯಕರ್ತರು ಸುಮ್ಮನಿದ್ದಾರೆ. ಇಲ್ಲದಿದ್ದರೆ ಆತನ ಕತೆ ಬೇರೆಯೇ ಆಗಿರುತ್ತಿತ್ತು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯಶ್​, ನಾನು ಯಾವತ್ತೂ ಜೆಡಿಎಸ್​ ವಿರುದ್ಧ ವೈಯಕ್ತಿಕ ದಾಳಿ ನಡೆಸಿಲ್ಲ. ನಾನು ಹೇಳದ ಮಾತನ್ನು ಹೇಳಿದ್ದೇನೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸದ್ಯಕ್ಕೆ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಸತ್ಯವನ್ನು ಪರಾಮರ್ಶಿಸದೆ ಯಾರೋ ಹೇಳಿದ ಮಾತನ್ನೆಲ್ಲ ಕೇಳಿಕೊಂಡು ಆರೋಪ ಮಾಡುತ್ತಿದ್ದಾರೆ. ನಾನು ಆ ರೀತಿ ಹೇಳಿದ್ದು ಹೌದೆಂದು ಯಾರಾದರೂ ಸಾಕ್ಷಿ ನೀಡಿದರೆ ಒಪ್ಪಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದರು.

Comments are closed.