ಕರ್ನಾಟಕ

ನನ್ನ ಪ್ರಶ್ನೆಗಳಿಗೆ ಪಕ್ಷದಿಂದ ಸಮಂಜಸ ಉತ್ತರ ಸಿಕ್ಕಿಲ್ಲ: ತೇಜಸ್ವಿನಿ ಅನಂತಕುಮಾರ್

Pinterest LinkedIn Tumblr

ಬೆಂಗಳೂರು: ನನ್ನ ಪ್ರಶ್ನೆಗಳಿಗೆ ಪಕ್ಷದಿಂದ ಸಮಂಜಸ ಉತ್ತರ ಬಯಸಿದ್ದು ನಿಜ. ಆದರೆ ಈ ಬಗ್ಗೆ ಪಕ್ಷದ ನಾಯಕರಿಂದ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಶ್ವಿನಿ ಅನಂತ್ ಕುಮಾರ್ ಅವರು ಹೇಳಿದ್ದಾರೆ.

ಈ ಮೂಲಕ ಟಿಕೆಟ್ ಕೈತಪ್ಪಿದ್ದಕ್ಕೆ ಹಾಗೂ ಡಿಎನ್ಎ ಬಗ್ಗೆ ಪಕ್ಷದ ವರಿಷ್ಠರು ಉತ್ತರ ನೀಡಬೇಕೆಂಬ ಸಂದೇಶವನ್ನು ರವಾನಿಸಿದ್ದಾರೆ.

ಇಂದು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಯುದ್ದಕಾಲ. ಹೀಗಾಗಿ ನಾಯಕರು ಮುಂದಿನ ದಿನಗಳಲ್ಲಿ ಉತ್ತರ ನೀಡಬಹುದು. ತಾವೂ ಕಾರಣ ಕೇಳಿಲ್ಲ, ಅವರೂ ಹೇಳಿಲ್ಲ ಎನ್ನುವ ಮೂಲಕ ಗೊಂದಲಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ. ಪಕ್ಷದ ನಾಯಕರು ಉತ್ತರ ಹೇಳುವ ಪ್ರಯತ್ನ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ವಿರುದ್ದ ನೋಟಾ ಚಲಾವಣೆ ಮಾಡುವಂತೆ ಮತದಾರರಿಗೆ ತಾವು ಕರೆ ನೀಡಿರುವುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕರಪತ್ರ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು , ಸಂಪೂರ್ಣ ಸುಳ್ಳು ಮಾಹಿತಿ. ಮತದಾರರಲ್ಲಿ ಗೊಂದಲ ಮೂಡಿಸಲು ಉದ್ದೇಶ ಪೂರ್ವಕವಾಗಿ ಇಂತಹ ಪ್ರಚಾರ ನಡೆಸಲಾಗುತ್ತಿದೆ. ನಕಲಿ ಕರಪತ್ರದ ಬಗ್ಗೆ ಈಗಾಗಲೇ ಸೈಬರ್ ಕ್ರೈಂ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತನಿಖೆ ನಡೆಸಿ ಯಾರೂ ಈ ಕೃತ್ಯದ ಹಿಂದೆ ಇರುವವರು ಎಂಬುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಿ ಎಂದರು.

ತಮ್ಮ ಮೇಲಿನ ಅಭಿಮಾನಕ್ಕೆ ಹಾಗೂ ಟಿಕೆಟ್ ಕೈ ತಪ್ಪಿದಿದ್ದಕ್ಕೆ ತಮ್ಮ ಬೆಂಬಲಿಗರೇ ಈ ರೀತಿ ಮಾಡಿದ್ದರೂ ಅದು ಪಕ್ಷ ವಿರೋಧಿ ಎನಿಸುತ್ತದೆ. ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಎಲ್ ಸಂತೋಷ್ ಅವರು ತಮ್ಮ ಬಗ್ಗೆ ಏನು ಹೇಳಿದ್ದಾರೆ ಎಂಬುದು ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ ಎಂದರು. ಡಿಎನ್ ಯ ಬಗ್ಗೆ ಅವರನ್ನೇ ಕೇಳಬೇಕು ಹಾಗಂತ ಬಿ.ಎ‍ಲ್.ಸಂತೋಷ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುತ್ತಿಲ್ಲ. ಅವರ ಜೊತೆ ಚರ್ಚಿಸಿ ಬಳಿಕ ಉತ್ತರ ನೀಡುತ್ತೇನೆ ಎಂದರು. ಪತ್ರಿಕೆಗಳಲ್ಲೆ ಬಂದ ವರದಿಯನ್ನಾಧರಿಸಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಹಾರಿಕೆ ಉತ್ತರ ನೀಡಿದರು.

ರಾಜ್ಯ ಉಪಾಧ್ಯಕ್ಷ ಸ್ಥಾನ ಒಪ್ಪಿದ್ದೇನೆ ಎಂದೇ ಅರ್ಥ. ಪಕ್ಷ ಚಟುವಟಿಕೆಯಲ್ಲಿ ನೇರವಾಗಿ ತೊಡಗಿಸಿಕೊಂಡವಳಲ್ಲ. ತಾವಿನ್ನು ಕಲಿಯುವುದು ಸಾಕಷ್ಟಿದೆ. ಮೊದಲು ಚುನಾವಣೆ ಜವಾಬ್ದಾರಿ ನಿರ್ವಹಣೆ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಶ್ವಿ ಸೂರ್ಯ ಮೇಲೆ ಬಂದಿರುವ ಮಹಿಳಾ ದೌರ್ಜನ್ಯ ನಡೆಸಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ವೇಳೆ ಇಂತಹ ಆರೋಪ ಬರುವುದು ಸಹಜ. ಅದು ಸತ್ಯವೋ ಸುಳ್ಳೊ ಎಂಬುದನ್ನು ತನಿಖೆ ಬಳಿಕ ತಿಳಿಯಲಿದೆ ಎಂದರು.

Comments are closed.