ಕರ್ನಾಟಕ

ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಕುಸುಮಾಳ ಜೀವನ ‘ಪರೀಕ್ಷೆ’ಯ ಕಥೆ ನೋಡಿ…

Pinterest LinkedIn Tumblr

ಬಳ್ಳಾರಿ: ದಿನವಿಡೀ ಪಂಕ್ಚರ್ ಹಾಕಿ ದಿನದ ತುತ್ತು ತುಂಬಿಸಿಕೊಳ್ಳುತ್ತಿದ್ದ ವ್ಯಕ್ತಿಯ ಮಗಳು ಇಂದು ಪಿಯುಸಿ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಬಿಡುವಿನ ಸಮಯದಲ್ಲಿ ತಾನೂ ಬೈಕ್ ಪಂಕ್ಚರ್ ಹಾಕುತ್ತಿದ್ದ ಪಿಯುಸಿ ಕಲಾ ವಿಭಾಗದ ಕುಸುಮ ಮೊದಲ ರ್ಯಾಂಕ್ ಪಡೆದು ಸಾಧನೆ ಮಾಡಿದವರು. ಇಂಥ ಸಾಧನೆ ಮಾಡಿದ್ದು ಬಳ್ಳಾರಿಯ ಕೊಟ್ಟೂರಿನ ಪಿಯು ಕಾಲೇಜು ವಿದ್ಯಾರ್ಥಿನಿ.

ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಕಾಲೋನಿಯ ನಿವಾಸಿ ಕುಸುಮ ಕಲಾ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ಐಚ್ಛಿಕ‌ ಕನ್ನಡ, ಇತಿಹಾಸ ಹಾಗೂ ರಾಜಕೀಯ ಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವ ಕುಸುಮ, ಎಜುಕೇಷನ್ 99, ಸಂಸ್ಕೃತ 99, ಕನ್ನಡ 96 ಅಂಕ ಪಡೆದು ಬರೋಬ್ಬರಿ 594 ಅಂಕ ಪಡೆದು ಮೊದಲಿಗರಾಗಿದ್ದಾರೆ.

ತಳಸಮುದಾಯದ ತಂದೆ ದೇವೇಂದ್ರಪ್ಪ ಅವರಿಗೆ ತೀವ್ರ ಬಡತನ ಕಾಡುತ್ತಿದೆ. ಕಾಯಕವೇ ಕೈಲಾಸವೆಂದು ನಂಬಿದ ದೇವೇಂದ್ರಪ್ಪ ಪಂಕ್ಚರ್ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ಪಂಕ್ಚರ್ ಅಂಗಡಿ ಮೂಲಕವೇ ತಮ್ಮ ಐವರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ದೇವೇಂದ್ರಪ್ಪ. ಅವರ ಕೊನೆಯ ಮಗಳು ಕುಸುಮ ಪಿಯುಸಿಯಲ್ಲಿ ಟಾಪರ್ ಆಗುವ ಮೂಲಕ ಹೆಮ್ಮೆ ತಂದಿದ್ದಾರೆ.

ಎರಡನೇ ಮಗ ಸಹ ಶಿಕ್ಷಣ ಪಡೆದಿದ್ದಾನಾದರೂ ಪಂಕ್ಚರ್ ಹಾಕುತ್ತ ಜೀವನ ನಡೆಸುತ್ತಿದ್ದಾನೆ. ಅಣ್ಣ ಹಾಗೂ ತಂದೆಯಂತೆ ಕುಸುಮ ಪಂಕ್ಚರ್ ಹಾಕುವುದಲ್ಲಿಯೂ ಎಕ್ಸ್ ಪರ್ಟ್‌. ರಜೆ ದಿನಗಳು ಹಾಗೂ ಖಾಲಿಯಿದ್ದಾಗ ಬೈಕ್, ಸೈಕಲ್ ಪಂಕ್ಚರ್ ಹಾಕಿ ಮನೆಗೆ ಮಗನಾಗಿ ಸಹಕಾರಿಯಾಗಿದ್ದಾಳೆ. ಇಂಥ ಅಂಗಡಿ, ಮನೆಗೆಲಸ ಮಾಡಿಕೊಂಡೇ ಕಲಾ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಎಸ್ ಎಸ್ ಎಲ್ ಸಿ ಯಲ್ಲಿ ಶೇ. 92 ಅಂಕ ಗಳಿಸಿದ್ದ ಕುಸುಮ ಪಿಯುಸಿಯಲ್ಲಿ ಟಾಪರ್ ಕನಸು ಕಂಡಿದ್ದಳು. ಇದಕ್ಕೆ ಇಂದು ಪಿಯು ಕಾಲೇಜು ಅರ್ಧ ಫೀಸು ಪಡೆದು ಸಹಾಯ ಮಾಡಿದೆ.

ಅಂದಹಾಗೆ ಕೊಟ್ಟೂರಿನ ಇಂದು ಪಿಯು ಕಾಲೇಜು ಕಳೆದೈದು ವರುಷದಿಂದ ಕಲಾ ವಿಭಾಗದ ಟಾಪರ್ ಸ್ಥಾನ ಇಲ್ಲಿನ ವಿದ್ಯಾರ್ಥಿಗಳೇ ಪಡೆದಿದ್ದಾರೆ. ಪ್ರತಿವರುಷವೂ ರ್ಯಾಂಕ್ ಪಡೆದು ಬಳ್ಳಾರಿ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ತಂದಿದೆ. ಕಳೆದೆರಡು ವರುಷದ ಹಿಂದೆ ತಳ್ಳುವ ಗಾಡಿ ಬಾಳೆಹಣ್ಣು ಮಾರುವ ಮಗಳು ಕಲಾ ವಿಭಾಗದಲ್ಲಿ ಟಾಪರ್ ಆಗಿದ್ದರು. ಈ ಬಾರಿ ಪಂಕ್ಚರ್ ಹಾಕುವ ಮಗಳು ಸ್ವತಃ ಪಂಕ್ಚರ್‌ ಹಾಕಿ ಟಾಪರ್ ಆಗಿ ಸಾಧನೆ ಮಾಡಿದ್ದಾರೆ.

“ಕಳೆದ ನಾಲ್ಕು ವರುಷಗಳಿಂದ ಕಲಾ ವಿಭಾಗದಲ್ಲಿ ಇಂದು ಪಿಯು ಕಾಲೇಜು ವಿದ್ಯಾರ್ಥಿಗಳೇ ಟಾಪರ್ ಅಗಿ ಹೊರಹೊಮ್ಮಿದ್ದಾರೆ. ಈ ಬಾರಿ ನಾನು ಟಾಪರ್ ಆಗಬೇಕೆಂದು ಪರಿಶ್ರಮಪಟ್ಟೆ. ಬಿಸಿಲಿನಲ್ಲಿ ತಂದೆ ಕಷ್ಟಪಡೋದು ನೋಡಿ ಬೇಸರವಾಗುತ್ತಿತ್ತು. ಅದಕ್ಕೆ ನಾನು ಸಹಾಯ ಮಾಡಿ ಓದಿದ್ದಕ್ಕೆ ಬೆಲೆ ಸಿಕ್ಕಿದೆ. ಎಸ್ ಎಸ್ ಲಿ ಸಿ ಶೆ.92ರಷ್ಟು ಅಂಕ ಗಳಿಸಿದೆ. ಅರ್ಧ ಶುಲ್ಕ ಪಡೆದು ಇಂದು ಪಿಯು ಕಾಲೇಜು ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದೆ. ಮುಂದೆ ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿದ್ದೇನೆ,” ಎಂದು ಕುಸುಮ ನ್ಯೂಸ್ 18ಗೆ ತನ್ನ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

“ಕಳೆದೈದು ವರುಷದಿಂದ ನಮ್ಮ ಕಾಲೇಜು ವಿದ್ಯಾರ್ಥಿಗಳು ಟಾಪರ್ ಆಗುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ಒತ್ತಾಸೆ, ಪ್ರೀತಿಯಿಂದ ನಾವು ಸಾಧನೆ ಮಾಡಿದ್ದೇವೆ. ಪಂಕ್ಚರ್ ಹಾಕುವ ವ್ಯಕ್ತಿಯ ಮಗಳು ಟಾಪರ್ ಅಗಿರೋದು ಶಿಕ್ಷಣಕ್ಕಿರುವ ಬೆಲೆ ತೋರಿಸುತ್ತೆ,” ಎಂದು ಕೊಟ್ಟೂರು ಇಂದು ಪಿಯು ಕಾಲೇಜು ಪ್ರಾಂಶುಪಾಲ ವೀರಭದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.