ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶಿವನ ಶಾಪ ತಟ್ಟುತ್ತೆ. ಅದು ನೆಲಕಚ್ಚುವುದು ಶತಃಸಿದ್ಧ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸ್ವಗ್ರಾಮ ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿರುವ ಅವರ ಕುಟುಂಬಕ್ಕೆ ಸೇರಿದ ಶಿವನ ದೇವಸ್ಥಾನದ ಪೂಜಾರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರ ಬಗ್ಗೆ ಅವರು ಪ್ರತಿಕ್ರಿಯಿಸಿದರು.
ಹಿಂದು ದೇವಾಲಯವನ್ನೂ ಬಿಡದ ಅಧಿಕಾರಿಗಳು
ಶಿವನ ದೇವಸ್ಥಾನದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವ ಕ್ರಮವನ್ನು ಖಂಡಿಸಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯವರು ಹಿಂದುಗಳನ್ನು ರಕ್ಷಿಸುವ ಪರಿ ಇದೇನಾ ಎಂದು ಪ್ರಶ್ನಿಸಿದರು.
ಚುನಾವಣೆ ಗೆಲ್ಲಬೇಕು ಎಂದ ಏಕೈಕ ಉದ್ದೇಶದಿಂದ ಐಟಿ ಅಧಿಕಾರಿಗಳು ಹೀಗೆಲ್ಲ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಅಣತಿಯಂತೆ ಈ ದಾಳಿಗಳು ನಡೆಯುತ್ತಿವೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಣಿಯಲು ಪ್ರಧಾನಿ ಮೋದಿ ಈ ಹುನ್ನಾರ ನಡೆಸುದ್ದಾರೆ. ಅವರ ಈ ಕ್ರಮವನ್ನು ಹಿಂದುಗಳು ಸಹಿಸಲು ಸಾಧ್ಯವಿಲ್ಲ ಎಂದರು.
ದೇವೇಗೌಡರ ಹಣ ಇಟ್ಟುಕೊಂಡಿದ್ದೀರಾ ಎಂದು ಪ್ರಶ್ನೆ
ದೇವಾಲಯದ ಪೂಜಾರಿಯ ಪತ್ನಿ ನೀಲಮ್ಮನ ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳು ಎಂದು ಹೇಳಿಕೊಂಡ ಇಬ್ಬರು ದೇವಸ್ಥಾನದ ಪಕ್ಕದಲ್ಲೇ ಇರುವ ತಮ್ಮ ಮನೆಯೊಳಗೆ ನುಗ್ಗಿದರು. ಮನೆಯ ಮೂಲೆಮೂಲೆಯನ್ನೂ ಪರಿಶೀಲಿಸಿದರು. ಬಳಿಕ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಕೂಡ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಅಲ್ಲಿ ಕೂಡ ಪರಿಶೀಲನೆ ನಡೆಸಲು ಮುಂದಾಗಿದ್ದರು. ಆದರೆ, ಅದು ಅತ್ಯಂತ ಪವಿತ್ರ ಸ್ಥಳವಾದ್ದರಿಂದ, ಅಲ್ಲಿಗೆ ಪ್ರವೇಶ ನಿರಾಕರಿಸಿದೆವು. ಇದು ಧರ್ಮ ವಿರೋಧಿ ಕ್ರಮ ಎಂದು ಅವರಿಗೆ ತಿಳಿ ಹೇಳಿದೆವು. ಬಳಿಕ ಗರ್ಭಗೃಹದ ಹೊರಗಷ್ಟೇ ಜಾಲಾಡಿದ ಅವರು ಬರಿಗೈಯಲ್ಲಿ ಮರಳಿದರು ಎಂದು ತಿಳಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅಥವಾ ಅವರ ಕುಟುಂಬ ವರ್ಗದವರ ಹಣವನ್ನು ದೇವಾಲಯದಲ್ಲಿ ಇಟ್ಟುಕೊಂಡಿದ್ದೀರಾ ಎಂದು ಆದಾಯ ತೆರಿಗೆ ಅಧಿಕಾರಿಗಳು ಪ್ರಶ್ನಿಸಿದ್ದಾಗಿ ನೀಲಮ್ಮ ಹೇಳಿದರು.
Comments are closed.