ಕರ್ನಾಟಕ

ಬಿಜೆಪಿ ಪಕ್ಷವು ಅನಂತ ಕುಮಾರ್​ಗೆ ಕೊಟ್ಟ ಎಲ್ಲವನ್ನು ಅವರ ಪತ್ನಿ ತೇಜಸ್ವಿನಿಗೂ ನೀಡಬೇಕು ಎಂದರೆ ಆಗುತ್ತಾ…?; ಬಿಎಲ್​ ಸಂತೋಷ್​​

Pinterest LinkedIn Tumblr

ಚಾಮರಾಜನಗರ: ಅನಂತ ಕುಮಾರ್​ಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ಕೇಂದ್ರ ಸಚಿವ ಸ್ಥಾನದಿಂದ ಎಲ್ಲ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಅದನ್ನೇ ಅವರ ಹೆಂಡತಿಗೂ ನೀಡಬೇಕೆಂದರೆ ಹೇಗೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್​ ಸಂತೋಷ್​ ಪ್ರಶ್ನಿಸಿದ್ದಾರೆ.

ತೇಜಸ್ವಿನಿ ಅನಂತ ಕುಮಾರ್​ ಅವರಿಗೆ ಟಿಕೆಟ್​ ಕೈ ತಪ್ಪಿದ ಕುರಿತು ಇದೇ ಮೊದಲ ಬಾರಿ ಅನಂತ ಕುಮಾರ್​ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

ತೇಜಸ್ವಿನಿ ಅವರಿಗೆ ನಾನು ಟಿಕೆಟ್ ತಪ್ಪಿಸಿದ್ದು ಎನ್ನುವುದು ಸುಳ್ಳು. ಅವರ ಬಗ್ಗೆ ಗೌರವವಿದೆ. ಅವರ ಸಾಮರ್ಥ್ಯವನ್ನು ಲೆಕ್ಕಹಾಕಿ ರಾಜ್ಯದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ತೇಜಸ್ವಿ ಸೂರ್ಯಗೆ ಟಿಕೆಟ್​ ನೀಡಿದ್ದನ್ನು ಸಮರ್ಥಿಸಿಕೊಂಡರು.

ಪಕ್ಷ ಕಟ್ಟಿದವರಲ್ಲಿ ಅನಂತಕುಮಾರ್ ಕೂಡ ಒಬ್ಬರು. ರಾಜಕಾರಣದಲ್ಲಿ ಇನ್ನು 20-30 ವರ್ಷ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದರೆ ಸಮರ್ಥ ಅಭ್ಯರ್ಥಿಗೆ ಟಿಕೆಟ್​ ನೀಡಬೇಕು. ಅದನ್ನು ಪಕ್ಷ ಮಾಡಿದೆ. ಅದನ್ನು ಬಿಟ್ಟು ಜೀನ್ಸ್​, ಡಿಎನ್​ಎ ಆಧಾರದ ಮೇಲೆ ಟಿಕೆಟ್​ ಕೊಡುತ್ತಾ ಹೋದರೆ ಹೇಗೆ? ಹಾಗಾದರೆ ಪಕ್ಷದ ಸದಸ್ಯತ್ವಕ್ಕೆ ಬೆಲೆ ಇರುವುದಿಲ್ಲ ಎಂದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತ್​ಕುಮಾರ್ ಅವರ ಟಿಕೆಟ್​ ಕೈ ತಪ್ಪಲು ಬಿಎಲ್​ ಸಂತೋಷ್​ ಕಾರಣ. ಅವರೇ ತೇಜಸ್ವಿ ಸೂರ್ಯಗೆ ಟಿಕೆಟ್​ ಕೊಡಿಸಲು ಕಾರಣ ಎಂಬ ಮಾತುಗಳನ್ನು ಬಿಜೆಪಿ ನಾಯಕರೇ ಆಡಿದ್ದರು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ. ಈ ಕುರಿತು ಇದೇ ಮೊದಲ ಬಾರಿಗೆ ಸಂತೋಷ್​ ಮಾತನಾಡಿದ್ದಾರೆ.

ತೇಜಸ್ವಿ ಸೂರ್ಯಗೆ ಟಿಕೆಟ್​ ಸಿಕ್ಕ ಕೂಡಲೇ ಅವರು ಸಂತೋಷ್​ ಅವರಿಗೆ ಧನ್ಯವಾದ ತಿಳಿಸಿ, ಟ್ವೀಟ್​ ಮಾಡಿದ್ದರು. ಅನುಕಂಪದ ಅಧಾರದ ಮೇಲೆ ಟಿಕೆಟ್​ ನೀಡಿದರೆ ಪಕ್ಷ ಸಂಘಟನೆ ಮಾಡುವುದು ಹೇಗೆ. ಪಕ್ಷ ಮುಂದಿನ ಜನಾಂಗವನ್ನು ಬೆಳಸಲು ಯುವಕರಿಗೆ ಟಿಕೆಟ್​ ನೀಡುವುದು ಅವಶ್ಯ ಎಂಬ ವಾದವನ್ನು ಕೂಡ ಸಂತೋಷ್​ ದೆಹಲಿ ಹೈ ಕಮಾಂಡ್​ ಮುಂದಿಟ್ಟಿದ್ದರು ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬಂದಿದ್ದವು.

Comments are closed.