ಕರ್ನಾಟಕ

ಪ್ರಜ್ವಲ್ ರೇವಣ್ಣ ಸೋಲಿಸಲು ಕಾಂಗ್ರೆಸ್ ಪ್ಲಾನ್ ತಿಳಿಸಿದ ಕೈ ಮಾಜಿ ಶಾಸಕ

Pinterest LinkedIn Tumblr


ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ರಾಜಕೀಯದಲ್ಲಿ ಹಲವು ಟ್ವಿಸ್ಟ್ ಗಳು ಸಿಗುತ್ತಿದ್ದು, ಇಂದು ಕಾಂಗ್ರೆಸ್ ಮಾಜಿ ಶಾಸಕ ಹೆಚ್ ಎಂ ವಿಶ್ಚನಾಥ್ ಅವರು ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ವೇಳೆ ಹಾಸನ ಕಾಂಗ್ರೆಸ್ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂಲತಃ ಆರ್ ಎಸ್‍ಎಸ್ ನಿಂದಲೇ ಬಂದವನಾಗಿದ್ದು, ಇಂದು ಲಕ್ಷಾಂತರ ಹಾಸನ ಕಾರ್ಯಕರ್ತರ ಪ್ರತಿನಿಧಿಯಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಅಂದು ಬಿಎಸ್‍ವೈ, ನಾನು, ಎಚ್‍ಡಿ ದೇವೇಗೌಡ ಅವರು ಇಂದಿರಾ ಅವರ ವಿರುದ್ಧ ಹೋರಾಟ ನಡೆಸಿ ಹಾಸನದಲ್ಲಿ ಜೈಲು ಸೇರಿದ್ದೇವು. ಅಂದು ವಂಶ ರಾಜಕೀಯ ವಿರುದ್ಧದ ಹೋರಾಟ ನನ್ನದು ಎಂದು ದೇವೇಗೌಡರು ಹೇಳಿದ್ದರು. ಆದರೆ ಇಂದು ಒಂದೇ ಕುಟುಂಬದ ಮೂವರು ಸಂಸತ್‍ಗೆ ಆಯ್ಕೆ ಆಗಲು ಮುಂದಾಗಿದ್ದಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದಿಂದ ಎರಡು ಗುಂಪುಗಳಾಗಿ ನಾವು ವಿಭಜನೆ ಆಗಿದ್ದೇವೆ. ಮೊದಲ ಗುಂಪು ಸೂಸೈಡ್ ತಂಡವಾಗಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುವುದು. 2ನೇ ಗುಂಪು ಕಾಂಗ್ರೆಸ್ಸಿನಲ್ಲೇ ಇರಲಿದೆ. ಈ ಗುಂಪು ಪ್ರಜ್ವಲ್ ಸೋಲಿಗೆ ಶ್ರಮಿಸಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ತಂತ್ರವನ್ನು ಬಿಚ್ಚಿಟ್ಟರು.

ಇದಕ್ಕೂ ಮುನ್ನ ಬಹಿರಂಗವಾಗಿ ಬಿಎಸ್‍ವೈ ಅವರ ಕ್ಷಮೆ ಕೋರಿದ ಮಾಜಿ ಶಾಸಕ ಎಚ್‍ಎಂ ವಿಶ್ವನಾಥ್ ಅವರು, ಹಿಂದೆ ನಾನು ಜೆಡಿಎಸ್ ನಿಂದ ಕೈಬಿಟ್ಟಾಗ ಯಡಿಯೂರಪ್ಪ ಅವರು ಕರೆ ಮಾಡಿ ಅಹ್ವಾನ ನೀಡಿದ್ದರು. ಆದರೆ ಅಂದು ಜಿಲ್ಲೆಯ ಪರಿಸ್ಥಿತಿಯಿಂದ ಬರಲು ಸಾಧ್ಯವಾಗಲಿಲ್ಲ. ಇಂದು ಹಾಸನ ಕಾಂಗ್ರೆಸ್ಸಿನ ಸುಮಾರು 4 ಲಕ್ಷ ಮತದಾರರು ಬಿಜೆಪಿಗೆ ಮತ ಹಾಕಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.

ಹೊಳೆನರಸಿಪುರ ವಂಶ ರಾಜಕಾರಣ ಮಾಡಿ ನಿಮ್ಮ ಜೊತೆಯಲ್ಲದ್ದ ಎಲ್ಲ ನಾಯಕರನ್ನು ದೂರ ಮಾಡಿದ್ದೀರಿ. ಅಕ್ರಮವಾಗಿ ಸಂಪಾದನೆ ಮಾಡಿದ ನಿಮ್ಮ ಆಸ್ತಿಯನ್ನು ರಕ್ಷಣೆ ಮಾಡಲು ಇಂದು ಕುಟುಂಬ ರಾಜಕಾರಣಕ್ಕೆ ಮುಂದಾಗಿದ್ದೀರಿ. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾಲನ್ನು ಹಿಡಿದುಕೊಂಡು ಏನು ಮನವಿ ಮಾಡಿದ್ದೀರಿ? ರಾಜ್ಯಪಾಲರ ಬಳಿ ಏನು ಕೇಳಿಕೊಂಡಿದ್ದೀರಿ ಎಂಬ ಬಗ್ಗೆ ದಾಖಲೆಗಳಿದ್ದು, ಸಮಯ ಬಂದಾಗ ಎಲ್ಲವೂ ಹೊರ ಬರಲಿದೆ. ಮೇ 23 ರಂದು ಬಿಜೆಪಿ ಗೆಲುವು ಪಡೆಯಲಿದ್ದು, ಮೇ 30ಕ್ಕೆ ಈ ಸರ್ಕಾರ ಉರುಳಲಿದೆ ಎಂದು ಭವಿಷ್ಯ ನುಡಿದರು.

ಎತ್ತಿನ ಹೊಳೆ ಯೋಜನೆಯನ್ನು ಪ್ರಾರಂಭ ಮಾಡಲು ಪ್ರಮುಖ ಕಾರಣರಾಗಿದ್ದು ಸದಾನಂದ ಗೌಡ ಅವರು. ಆದರೆ ಇಂದು ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಯಾವುದೇ ಸಭೆಯನ್ನು ಕರೆದು ಚರ್ಚೆ ಮಾಡಿಲ್ಲ. ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತಿದಂತೆ ರಾಜ್ಯ ಮೈತ್ರಿ ಸರ್ಕಾರ ಉರುಳಲಿದೆ. ಬಿಜೆಪಿ ಸರ್ಕಾರ ರಚನೆ ಆಗುತ್ತದೆ. ಕರ್ನಾಟಕ ಮುಖ್ಯಮಂತ್ರಿ ಆಗಲು ಬಿಎಸ್‍ವೈ ಅವರಿಗೆ ನಿಮ್ಮ ಬೆಂಬಲ ಅಗತ್ಯವಿದೆ ಎಂದು ಮನವಿ ಮಾಡಿದರು.

Comments are closed.